ಏಕದಿನ ವಿಶ್ವಕಪ್​ನಂತೆ ಟಿ20 ವಿಶ್ವಕಪ್​ ಸಹ ಮರೆತು ಬಿಡಿ! ಭಜ್ಜಿ ಶಾಕಿಂಗ್​ ಹೇಳಿಕೆ ಬೆನ್ನಲ್ಲೇ ಚರ್ಚೆ ಶುರು

Harbhajan Singh
Published on

ನವದೆಹಲಿ: ಸದ್ಯ ಟೀಮ್​ ಇಂಡಿಯಾ ಕ್ರಿಕೆಟಿಗರು ಐಪಿಎಲ್‌ನಲ್ಲಿ ಬಿಜಿಯಾಗಿದ್ದಾರೆ. ಕೋಲ್ಕತ್ತ ನೈಟ್​ ರೈಡರ್ಸ್​ (ಕೆಕೆಆರ್​) ಮತ್ತು ರಾಜಸ್ಥಾನ ರಾಯಲ್ಸ್ ಸದ್ಯ ಪ್ಲೇ-ಆಫ್‌ಗೆ ಪ್ರವೇಶ ಪಡೆದಿವೆ. ಇನ್ನುಳಿದ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿರುವುದರಿಂದ ಐಪಿಎಲ್​ ಹೆಚ್ಚಿನ ಗಮನ ಸೆಳೆದಿದೆ. ಅದೇನೇ ಇರಲಿ ಈ ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಇರುವುದು ಎಲ್ಲರಿಗೂ ಗೊತ್ತೇ ಇದೆ. ಜೂನ್ 2ರಿಂದ ವೆಸ್ಟ್​ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಈ ಮೆಗಾ ಟೂರ್ನಮೆಂಟ್ ನಡೆಸಲಿದೆ. ಈ ಟೂರ್ನಿಗಾಗಿ ಈಗಾಗಲೇ ಬಿಸಿಸಿಐ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿರುವುದು ಗೊತ್ತೇ ಇದೆ. ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಟಿ20 ವಿಶ್ವಕಪ್‌ ಆಡಲು ಹೋಗಲಿದೆ. ಇದರ ನಡುವೆಯೇ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದು, ಬಹಳ ಚರ್ಚೆಯಾಗುತ್ತಿದೆ.

ಟಿ20 ವಿಶ್ವಕಪ್‌ಗೆ ತೆರಳಬೇಕಾದ ಭಾರತೀಯ ಆಟಗಾರರು ಇನ್ನೂ ಐಪಿಎಲ್‌ನಲ್ಲಿ ಬಿಜಿಯಾಗಿದ್ದಾರೆ. ಇನ್ನೂ 15 ದಿನಗಳಲ್ಲಿ ಚುಟುಕು ವಿಶ್ವಕಪ್ ಪ್ರಾರಂಭವಾಗಲಿದ್ದು, ಈ ಸಮಯದಲ್ಲೂ ಟೀಮ್​ ಇಂಡಿಯಾ ಒಟ್ಟಿಗೆ ಅಭ್ಯಾಸ ಮಾಡುತ್ತಿಲ್ಲ. ಆದರೆ, ಆಂಗ್ಲ ಕ್ರಿಕೆಟಿಗರು ಕೋಟಿಗಟ್ಟಲೆ ಹಣ ಬಿಟ್ಟು ತವರಿಗೆ ಹೋಗಿ ದೇಶಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ. ಟಿ20 ವಿಶ್ವಕಪ್​ಕ್ಕೆ ಸಿದ್ಧವಾಗಲು ಇಂಗ್ಲೆಂಡ್ ಆಟಗಾರರು ಐಪಿಎಲ್ ತೊರೆದಿದ್ದಾರೆ. ವಿಶ್ವಕಪ್ ಪಂದ್ಯಾವಳಿಯ ಮೊದಲು, ಇಡೀ ತಂಡವು ಒಟ್ಟಿಗೆ ಅಭ್ಯಾಸ ಮಾಡಲು ಮತ್ತು ಟಿ20 ಸರಣಿಯಲ್ಲಿ ಆಡಲಿದೆ.

ಆದರೆ ಟೀಮ್​ ಇಂಡಿಯಾ ಕ್ರಿಕೆಟಿಗರು ಮಾತ್ರ ಸಂಪೂರ್ಣ ಐಪಿಎಲ್​ನಲ್ಲಿ ಬಿಜಿಯಾಗಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಕೇವಲ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ತಂಡದಲ್ಲಿ ಸಂಯೋಜನೆಗಳನ್ನು ಹೊಂದಿಸಲು ಟೀಮ್ ಇಂಡಿಯಾ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದೆ. ಅಮೆರಿಕದ ಪರಿಸ್ಥಿತಿಗೆ ಒಗ್ಗಿಕೊಳ್ಳಲು ತಂಡದಲ್ಲಿರುವ ಎಲ್ಲ ಆಟಗಾರರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಜತೆ ಸೇರಿ ಆಡಿದರೆ ಟೀಂ ಇಂಡಿಯಾಕ್ಕೆ ಒಳ್ಳೆಯದು. ಆದರೆ, ಐಪಿಎಲ್​ ವೇಳಾಪಟ್ಟಿಯಿಂದಾಗಿ ಅದು ಆಗುತ್ತಿಲ್ಲ. ಅಲ್ಲದೆ, ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಪಂದ್ಯಾವಳಿಗಳಿಗೆ ಕನಿಷ್ಠ 10 ರಿಂದ 15 ದಿನಗಳ ಮೊದಲು ಎಲ್ಲ ಭಾರತೀಯ ಆಟಗಾರರು ಒಟ್ಟಿಗೆ ಇರುವುದು ಬಹಳ ಮುಖ್ಯ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹರ್ಭಜನ್​ ಸಿಂಗ್​ ಅವರ ಈ ಹೇಳಿಕೆಯ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಟಿ20 ವಿಶ್ವಕಪ್ ಅನ್ನು ಟೀಮ್​ ಇಂಡಿಯಾ ಕೈಚೆಲ್ಲಲಿದೆ ಎಂದು ಹೇಳುತ್ತಿದ್ದಾರೆ. ಏಕದಿನ ವಿಶ್ವಕಪ್​ನಂತೆ ಟಿ20 ವಿಶ್ವಕಪ್​ ಸಹ ಮರೆತು ಬಿಡಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ನಿಜಕ್ಕೂ ಐಪಿಎಲ್​ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಕನಸಿಗೆ ಅಡ್ಡಿಯಾಗುತ್ತದಾ? ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net