ಮಹಿಳಾ ಆಯೋಗ ನಿಷ್ಕ್ರಿಯವಾಗಿಲ್ಲ ಎಂದಾದರೆ ಶ್ವೇತಪತ್ರ ಹೊರಡಿಸಲಿ: ಆಮ್​ ಆದ್ಮಿ ಪಕ್ಷದ ಸವಾಲು

Aap
Published on

ಬೆಂಗಳೂರು: ರಾಜ್ಯ ಮಹಿಳಾ ಆಯೋಗವು ನಿಷ್ಕ್ರಿಯಗೊಂಡಿದೆ ಎಂದು ಈಗಾಗಲೇ ಮಾಡಲಾಗಿರುವ ಆರೋಪವನ್ನು ಸಮರ್ಥಿಸಿಕೊಂಡಿರುವ ಆಮ್​ ಆದ್ಮಿ ಪಕ್ಷ, ಆ ಕುರಿತಾಗಿ ಸವಾಲೊಂದನ್ನು ಕೂಡ ಹಾಕಿದೆ. ನಿಷ್ಕ್ರಿಯವಾಗಿಲ್ಲ ಎಂಬುದು ಆಯೋಗದ ಉತ್ತರವಾಗಿದ್ದರೆ, ಆಯೋಗವು ಶ್ವೇತಪತ್ರವನ್ನು ಹೊರಡಿಸಲಿ ಎಂದು ಆಪ್​ನ ಮಹಿಳಾ ಘಟಕ ಹೇಳಿದೆ.

ಆಮ್​ ಆದ್ಮಿ ಪಕ್ಷದ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ಸವಾಲೆಸೆದಿದ್ದಾರೆ. ಮಕ್ಕಳು ಹಾಗೂ ತಾಯಿಯ ನಡುವಿನದು ಅವಿನಾಭಾವ ಸಂಬಂಧ. ಮಗು ದೌರ್ಜನ್ಯಕ್ಕೆ ಒಳಗಾದರೆ ಹೆಚ್ಚು ಕಷ್ಟ ಅನುಭವಿಸುವುದು ತಾಯಿ. ಆದ್ದರಿಂದ ಮಕ್ಕಳ ಮೇಲಿನ ದೌರ್ಜನ್ಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡುರವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಎಂಬ ಭೇದ ತೋರಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಆಯೋಗ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಹಿಳಾ ಆಯೋಗದ ನಿಷ್ಕ್ರಿಯತೆ ವಿರುದ್ಧ ಸೆ. 28ರಂದು ಆಮ್‌ ಆದ್ಮಿ ಪಾರ್ಟಿ ಬೃಹತ್‌ ಪ್ರತಿಭಟನೆ ಮಾಡಿತ್ತು. ನಮ್ಮ ಹೋರಾಟಕ್ಕೆ ಪ್ರತಿಕ್ರಿಯಿಸಿದ ಪ್ರಮೀಳಾ ನಾಯ್ಡು, 'ಆಯೋಗ ನಿಷ್ಕ್ರಿಯವಾಗಿಲ್ಲ' ಎಂದಿದ್ದಾರೆ. ನಾಡಿನ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯ ಪ್ರಕರಣಗಳು ನಡೆಯುವಾಗ ಮೌನವಾಗಿದ್ದ ಅವರು ನಮ್ಮ ಹೋರಾಟದ ಬಗ್ಗೆಯಾದರೂ ಪ್ರತಿಕ್ರಿಯಿಸಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿ. ಅವರ ಮಾತು ನಿಜವೇ ಆಗಿದ್ದರೆ, ಆಯೋಗದ ಕಾರ್ಯಚಟುವಟಿಕೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಆಯೋಗಕ್ಕೆ ಎಷ್ಟು ದೂರುಗಳು ಬಂದಿವೆ, ಎಷ್ಟು ಸಂತ್ರಸ್ತರನ್ನು ಅಧ್ಯಕ್ಷರು ಭೇಟಿಯಾಗಿದ್ದಾರೆ, ಎಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಲಾಗಿದೆ, ಮಹಿಳೆಯರ ಸುರಕ್ಷತೆಗೆ ಆಯೋಗ ಏನೇನು ಮಾಡಿದೆ ಎಂಬ ಬಗ್ಗೆ ಶ್ವೇತ್ರಪತ್ರದಲ್ಲಿ ಬಹಿರಂಗಪಡಿಸಲಿ ಎಂದು ಕುಶಲಾ ಸ್ವಾಮಿ ಸವಾಲು ಹಾಕಿದ್ದಾರೆ.

ಆಮ್‌ ಆದ್ಮಿ ಪಕ್ಷದ ಮಹಿಳಾ ನಾಯಕಿ ಉಷಾ ಮೋಹನ್‌ ಮಾತನಾಡಿ, ಆಪ್​ ಆಡಳಿತವಿರುವ ದೆಹಲಿಯಲ್ಲಿ ಇರುವುದು ಕೇವಲ ಮೂರು ಕೋಟಿ ಜನಸಂಖ್ಯೆ. ಆದರೂ ಅಲ್ಲಿನ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಕಳೆದ ಐದು ವರ್ಷಗಳಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆಸಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ ಎಂದರು.

ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸುಗಳನ್ನು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ಇದೇ ರೀತಿ, ನಮ್ಮ ಕರ್ನಾಟಕದ ಮಹಿಳಾ ಆಯೋಗದ ಸಾಧನೆ ತಿಳಿಯುವ ಸಂಪೂರ್ಣ ಹಕ್ಕು ರಾಜ್ಯದ ಮಹಿಳೆಯರಿಗೆ ಇದೆ. ಈ ಕುರಿತು ಆಯೋಗ ಶ್ವೇತ ಪತ್ರ ಹೊರಡಿಸಿದರೆ ಅದರ ನಿಜಬಣ್ಣ ಬಯಲಾಗುತ್ತದೆ ಎಂದು ಅವರು ಹೇಳಿದರು. ಎಎಪಿಯ ಮಹಿಳಾ ಮುಖಂಡರಾದ ವೀಣಾ ಸೆರ್ರಾವ್‌, ಸುಹಾಸಿನಿ ಫಣಿರಾಜ್‌, ಪಲ್ಲವಿ ಚಿದಂಬರ್, ಯೋಗಿತಾ ರೆಡ್ಡಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net