ಬೆಂಗಳೂರು: ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲಾ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ಐ ಡೋಂಟ್ ಕೇರ್ ಎಂದು ಖಡಕ್ ಆಗಿ ನುಡಿದರು.
ಇದನ್ನೂ ಓದಿ: ಚಿರಂಜೀವಿ, ಮಹೇಶ್ ಬಾಬು… ಯಾರೊಬ್ಬರು ಸ್ಪಂದಿಸುತ್ತಿಲ್ಲ, ಸಾಯುವುದೇ ಉಳಿದಿರುವ ದಾರಿ! ಹಿರಿಯ ನಟಿ ಕಣ್ಣೀರು | Pavala Syamala
“ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಹೆಸರಲ್ಲಿ ಘೋಷಿಸಿದ್ದಾರೆ. ಆದರೂ ಮಹಾರಾಷ್ಟ್ರ ಚುನಾವಣೆ ವೇಳೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯೇ ಆಗಿಲ್ಲ ಎಂದು ಸುಳ್ಳು ಜಾಹಿರಾತು ನೀಡಿದರು” ಎಂದು ಸಿಎಂ ವ್ಯಂಗ್ಯವಾಡಿದರು.
ಇವತ್ತು “ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದೆ. ಇದು ಅಪಾಯಕಾರಿ. ನಾನು ಇವತ್ತಿನವರೆಗೂ ಯಾವ ಮಾಧ್ಯಮದವರಿಗೂ ಯಾಕೆ ಹೀಗೆ ಬರೆದಿದ್ದೀರಿ ಅಂತ ಕೇಳಿಲ್ಲ. ಆದರೆ ನೀವು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸಾಧ್ಯವಾದರೆ ಸತ್ಯ ಬರೆಯೋಕೆ ಟ್ರೈ ಮಾಡಿ ನೋಡೋಣ ಎಂದರು. ಮನಸಾಕ್ಷಿಗೆ ತಕ್ಕಂತೆ ಮಾಧ್ಯಮಗಳು ವರದಿ ಮಾಡಿದರೆ ಸಮಾಜಕ್ಕೆ ಅದಕ್ಕಿಂತ ದೊಡ್ಡ ಸೇವೆ ಇಲ್ಲ. ಸುದ್ದಿಗಳನ್ನು ವೈಭವೀಕರಿಸುವುದು, ಮೂಢ ನಂಬಿಕೆಗಳನ್ನು ಬೆಂಬಲಿಸೋಕೆ ಹೋಗಬೇಡಿ ಎಂದರು.
ಇದನ್ನೂ ಓದಿ: ಅಂತಃಕರಣ ಇರುವವರು ಯಾರೂ ಕ್ಷಮಿಸಲು ಸಾಧ್ಯವಿಲ್ಲ; ಬೊಮ್ಮಾಯಿ
“ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಜ್ಯೋತಿಷಿಗಳನ್ನು ಚಾನಲ್ ಗಳಿಗೆ ಕರೆಸಿ ಏನೆಲ್ಲಾ ಹೇಳಿಸಿದ್ದೀರಿ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲ್ಲ ಎಂದು ತೋರಿಸಿದ್ದೀರಿ. ಆದರೆ ನಾನು ಐದು ವರ್ಷ ಪೂರೈಸಿ, ಈಗ ಎರಡನೇ ಬಾರಿ ಸಿಎಂ ಆಗಿದ್ದೇನೆ. ಈಗ ಹೇಳಿ ಕಾಗೆ ಸುದ್ದಿಯಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆ ಆಯ್ತೋ ಇಲ್ವೋ” ಎಂದು ಪ್ರಶ್ನಿಸಿದರು.
“ನಾವು ಜನಪರ ಕೆಲಸ ಮಾಡದಿದ್ದಾಗ, ಕೊಟ್ಟ ಮಾತು ಈಡೇರಿಸದಿದ್ದಾಗ ಅದನ್ನು ಬರೆದು ಜನರ ಕಣ್ಣು ತೆರೆಸುವ ಹಕ್ಕು ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅದನ್ನು ನಿಭಾಯಿಸಿ ಎಂದು ಕರೆ ನೀಡಿದರು. ನಾವು ಊಟಕ್ಕೆ ಸೇರಿ ಏನೋ ಮಾತಾಡಿರ್ತೀವಿ. ಆದರೆ ಮಾಧ್ಯಮಗಳೇ ಡೈಲಾಗ್ ಬರೆದು ಬಿಡ್ತಾರೆ. ನಮಗೆ ಗೊತ್ತೇ ಇರದ ವಿಷಯವನ್ನು ಅವರೇ ಡೈಲಾಗ್ ಬರೆದು ತೋರಿಸಿದ್ದಾರೆ” ಎಂದು ಟೀಕಿಸಿದರು.
ಇದನ್ನೂ ಓದಿ: ಜೆಡಿಎಸ್ ಸಂಕ್ರಾಂತಿ ಚಿತ್ರಕಲಾ ಸ್ಪರ್ಧೆ; ಹಾಸನದ ಟಿ.ಎಂ.ಧನುಷ್ ರಾಜ್ಯಕ್ಕೆ ಪ್ರಥಮ|JDS Sankranti Art Competition
ಬುದ್ದ, ಬಸವ, ಅಂಬೇಡ್ಕರ್ ಹೇಳಿದ ಸಮ ಸಮಾಜದ ಆಶಯ ಈಡೇರಿಸುವ ದಿಕ್ಕಿನಲ್ಲಿ ವೃತ್ತಿಪರತೆ ನಿರ್ವಹಿಸಿದರೆ ಅದು ಸಮಾಜಕ್ಕೆ ಉಪಯೋಗವಾಗುತ್ತದೆ ಎಂದು ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.
ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಜನಮುಖಿಯಾಗಿ ಕರ್ತವ್ಯ ನಿರ್ವಹಿಸಿ
ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರಾದ ಸಚಿವ ಎಂ.ಬಿ.ಪಾಟೀಲ್, ಸನ್ಮಾನಿತರಾದ ಸಚಿವರುಗಳಾದ ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್, ಕೆ.ಹೆಚ್.ಮುನಿಯಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರು ಉಪಸ್ಥಿತರಿದ್ದರು.