More

    ಅಧಿಕಾರ ತಲೆಗೇರಿದ್ರೆ ಇಳಿಸ್ತಾನೆ ಮತದಾರ!

    ಅಧಿಕಾರ ತಲೆಗೇರಿದ್ರೆ ಇಳಿಸ್ತಾನೆ ಮತದಾರ!ಬಿಜೆಪಿಯ ಗೆಲುವು ಸೋಲಿನ ಚರ್ಚೆ ಸಾಕಷ್ಟಾಗಿದೆ. ಇನ್ನು ಏನು ಹೇಳಿದರೂ ರ್ಚವಿತ-ಚರ್ವಣವೇ. ಆದರೂ ಹೇಳಲೇಬೇಕಾದ ಒಂದಷ್ಟು ಸಂಗತಿಗಳು ಉಳಿದುಹೋಗಬಾರದು ಎಂಬ ಕಾರಣಕ್ಕೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಮೊಟ್ಟಮೊದಲನೆಯದಾಗಿ ಕರ್ನಾಟಕ ಬಿಜೆಪಿಯ ಅಂತಃಶಕ್ತಿಯೇ ನರೇಂದ್ರ ಮೋದಿ. ಅವರೇ ಇವರ ವೀಕ್​ನೆಸ್ಸು ಕೂಡ! ಮೋದಿ ಖ್ಯಾತಿ ಈ ಪರಿ ಇರಲಿಲ್ಲವೆಂದಿದ್ದರೆ ಇವರು ಗೋಣುಬಗ್ಗಿಸಿ ದುಡಿದಿರುತ್ತಿದ್ದರೋ ಏನೋ. ಅವರು ಕೊನೆಯ ಎಂಟು ದಿನ ಮಾಡುವ ಪ್ರಚಾರಕ್ಕಾಗಿ ಇವರು ಅದೆಷ್ಟು ಹಪಹಪಿಸುತ್ತಿದ್ದರೆಂದರೆ ಅದರೊಂದಿಗೆ ಇಡೀ ಚಿತ್ರಣ ಬದಲಾಗುತ್ತದೆಂದು ಬಾಯ್ತೆರೆದು ಕುಳಿತುಕೊಂಡಿದ್ದರು. ಅತ್ತ ಮೋದಿ ಈ ಥರದ ಬದಲಾವಣೆ ತರಬಲ್ಲರೆಂಬ ಹೆದರಿಕೆಯಿಂದಲೇ ಕಾಂಗ್ರೆಸ್ಸು ಎರಡು ವರ್ಷಗಳಿಗಿಂತಲೂ ಹೆಚ್ಚುಕಾಲ ನಿರಂತರ ಚುನಾವಣಾ ಕಣದಲ್ಲಿ ತನ್ನನ್ನು ಸ್ಥಾಪಿಸಿಕೊಂಡಿತ್ತು. ಕೊನೆಯ ಎರಡು ದಿನಗಳಿಗೆ ಮಾತ್ರ ಚುನಾವಣಾರಂಗಕ್ಕೆ ಧುಮುಕುತ್ತಿದ್ದ ಕಾಂಗ್ರೆಸ್ಸು ಎರಡೆರಡು ವರ್ಷಗಳ ಕಾಲ ಪರಿಶ್ರಮ ಹಾಕಬೇಕಾಗಿ ಬಂದಿದ್ದು ಒಂದುರೀತಿ ಒಳ್ಳೆಯದೇ.

    ಮೋದಿ ಪ್ರಚಾರದ ಅಬ್ಬರ ಜೋರಾಗಿದ್ದದ್ದು ನಿಜ. ಆದರೆ ಅವರ ಖ್ಯಾತಿಯನ್ನು ಮತವಾಗಿ ಪರಿವರ್ತಿಸುವ ಯಾವ ಶಕ್ತಿಯೂ ಕೆಳಹಂತದಲ್ಲಿ ಕೆಲಸ ಮಾಡಲಿಲ್ಲ. ಮೋದಿ ಪ್ರತಿ ಭಾಷಣದಲ್ಲಿಯೂ ಯಾವುದೋ ಹೊಸ ವಿಚಾರವನ್ನೆತ್ತಿ ಚರ್ಚೆಗೆ ಬಿಡುತ್ತಿದ್ದರಲ್ಲ, ಬಿಜೆಪಿ ಎಂದಿಗೂ ಅದನ್ನು ಮುಂದಕ್ಕೊಯ್ಯಲಿಲ್ಲ. ಸೋನಿಯಾ ಕರ್ನಾಟಕವನ್ನು, ಇದರ ಸಾರ್ವಭೌಮತೆಯನ್ನು ರಾಷ್ಟ್ರಕ್ಕಿಂತ ಪ್ರತ್ಯೇಕವೆಂಬಂತೆ ಮಾತನಾಡಿದ್ದನ್ನು ನಂಜನಗೂಡಿನಲ್ಲಿ ಮೋದಿ ಖಂಡಿಸಿದ್ದರಲ್ಲ, ಅದೇನೆಂದು ಬಿಜೆಪಿಯ ನಾಯಕರಿಗೆ ಕೇಳಿ, ಒಬ್ಬರಿಗಾದರೂ ಅದರ ಅರಿವೇ ಇಲ್ಲ. ಅನುವಾದಕ್ಕೆಂದು ನಿಲ್ಲುತ್ತಿದ್ದ ಗೋ. ಮಧುಸೂದನ್ ಮೋದಿಯವರ ಭಾವನಾತ್ಮಕ ಕೋರಿಕೆಯನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ಎಷ್ಟರಮಟ್ಟಿಗೆ ಎಡವಿದರೆಂದರೆ ಕೊನೆ-ಕೊನೆಗೆ ಅನುವಾದ ಹೊರೆ ಎನಿಸಲಾರಂಭಿಸಿತ್ತು. ಬಿಜೆಪಿ ಚುನಾವಣಾ ಯುದ್ಧವನ್ನೆದುರಿಸಲು ಸಿದ್ಧತೆಯನ್ನೇ ಮಾಡಿಕೊಂಡಿರಲಿಲ್ಲ. ಮೋದಿಯಂತಹ ಸ್ಟಾರ್ ಕ್ಯಾಂಪೇನರ್ ಇದ್ದೂ ಅದು ತನ್ನ ಪ್ರಭಾವವನ್ನು ಬೀರಲಾಗಲಿಲ್ಲ. ಅದೇ ವೇಳೆ ಕಾಂಗ್ರೆಸ್ಸು ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಹುಲ್​ರನ್ನು ಹೆಚ್ಚು-ಕಡಿಮೆ ಕರ್ನಾಟಕಕ್ಕೆ ಕರೆಯಲೇ ಇಲ್ಲ. ಅವರು ಬಂದಷ್ಟೂ ಬಿಜೆಪಿಗೆ ಲಾಭ ಎಂಬ ಟ್ರೋಲ್​ಗಳ ಮಾತನ್ನು ಅವರೂ ಒಪ್ಪಿಕೊಂಡುಬಿಟ್ಟಂತಿದೆ. ಮೋದಿಗಿಂತ ಬಿಜೆಪಿಯ ಪಾಲಿಗೆ ಹೆಚ್ಚು ವರದಾನ ರಾಹುಲ್ ಎಂಬುದು ಮತ್ತೊಮ್ಮೆ ಸಾಬೀತಾಯ್ತು ಅಷ್ಟೇ. ಕಾಂಗ್ರೆಸ್ಸಿನ ತಯಾರಿ ಅಷ್ಟು ಚುರುಕಾಗಿತ್ತು.

    ಕಾಂಗ್ರೆಸ್ಸಿನ ಹೋರಾಟದ ಹಾದಿಯನ್ನು ಗಮನಿಸಿ. ಬಿಜೆಪಿ 40% ಸರ್ಕಾರ ಎನ್ನುವುದನ್ನು ಅವರು ಜನರ ಮನಸ್ಸಿನಲ್ಲಿ ಎರಡು ವರ್ಷಗಳ ಪ್ರಯತ್ನದಿಂದಾಗಿ ಉಳಿಸಿಬಿಟ್ಟರು. ಅವರ ‘ಪೇಸಿಎಂ’ ಚಳವಳಿಗೆ ಸರ್ಕಾರದ ಕಡೆಯಿಂದ ಉತ್ತರವೇ ಇರಲಿಲ್ಲ. ಪರಿಸ್ಥಿತಿ ಎಲ್ಲಿಗೆ ಮುಟ್ಟಿತೆಂದರೆ ಈ ಸರ್ಕಾರ 40 ಪ್ರತಿಶತ ಕಮಿಷನ್ನಿನದು ಎನ್ನುವುದನ್ನು ಕಾಂಗ್ರೆಸ್ಸಿಗರು ಬಿಡಿ, ಸ್ವತಃ ಬಿಜೆಪಿಗರೂ ಮಾತನಾಡಿಕೊಳ್ಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಡೆಸಿದ ಹೋರಾಟವೇನು ಗೊತ್ತೇ? ಸ್ಕಾ್ಯಮ್ ರಾಮಯ್ಯ, ಸಿದ್ದರಾಮಯ್ಯರ ಒಟ್ಟಾರೆ ಅವಧಿಯನ್ನು ಹಗರಣಗಳ ಅವಧಿ ಎಂದು ಕರೆಯಲು ಅವರು ಹರಸಾಹಸಪಟ್ಟರು. ಜನರ ಮನಸ್ಸಿನಲ್ಲಿ ಅದನ್ನು ಬಲವಾಗಿ ಕೂರಿಸಬಲ್ಲ ಯಾವ ದಾಳವೂ ಅವರ ಬಳಿ ಇರಲಿಲ್ಲ. ಕೊನೆಗೂ ತಲೆಯಲ್ಲಿ ಉಳಿದಿದ್ದು 40% ಸರ್ಕಾರ ಮಾತ್ರ. ಕರೊನಾ ಕಾಲದಲ್ಲಿ ಹೆಚ್ಚು-ಕಡಿಮೆ ವಾರಕ್ಕೊಂದು ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಕಾಂಗ್ರೆಸ್ಸು ಬಿಜೆಪಿಯನ್ನು ಸುತ್ತುವರೆದು ನಿಂತುಬಿಟ್ಟಿತ್ತು. ಲೂಟಿ ಮಾಡುತ್ತಿರುವ ನಾಯಕರನ್ನು ಕಂಡು ಬಿಜೆಪಿಯ ಕಾರ್ಯಕರ್ತನೂ ಪೆಚ್ಚಾಗಿ ಸುಮ್ಮನಾಗಿಬಿಟ್ಟ. ಕೆಳಹಂತದಲ್ಲಿ ಕಾಂಗ್ರೆಸ್ಸಿಗರು ಕೇಳುವ ಪ್ರಶ್ನೆಗೆ ಆತ ನಿರುತ್ತರನಾದ. ಏರುತ್ತಿರುವ ಬೆಲೆ, ಕುಸಿಯುತ್ತಿರುವ ಜೀವನಮಟ್ಟ, ನಿರುದ್ಯೋಗದ ಕುರಿತಂತೆ ಡಿಕೆಶಿ ನಡೆಸಿದ 100 ನಾಟ್​ಔಟ್ ಪ್ರತಿಭಟನೆಗಳು ಎಚ್ಚರಿಕೆಯ ಗಂಟೆಗಳಾಗಬೇಕಿತ್ತು. ಇವರೆಲ್ಲ ಉಡಾಫೆಯಿಂದ ಕುಳಿತುಬಿಟ್ಟಿದ್ದರು. ಅದೇ.. ‘ಮೋದಿ ಬರ್ತಾರೆ, ನಾವು ಮತ್ತೆ ಕುರ್ಚಿ ಹಿಡಿತೀವಿ’ ಎನ್ನುವ ಭ್ರಮೆಯಲ್ಲಿ!

    ರಾಹುಲ್​ರ ಭಾರತ್ ಜೋಡೊ ಶುರುವಾಯ್ತು. ಅದನ್ನು ಬಿಜೆಪಿಯ ನಾಯಕರೆಲ್ಲ ಆಡಿಕೊಂಡರು. ಹಿರಿಯ ನಾಯಕರೊಬ್ಬರ ಬಳಿ, ಭಾರತ್ ಜೋಡೊ ಕಾಂಗ್ರೆಸ್ ಕಾರ್ಯಕರ್ತರನ್ನು ಒಂದೆಡೆ ಸೇರುವಂತೆ ಮಾಡುತ್ತಿದೆ. ಬರುವ ದಿನಗಳಲ್ಲಿ ಈ ಕಾರ್ಯಕರ್ತರು ಬಿಜೆಪಿಗೆ ತಲೆನೋವಾಗಬಲ್ಲರು ಎಂದು ಹೇಳಿದ್ದಕ್ಕೆ ‘ನಮ್ಮ ಸರ್ವೆಯ ಪ್ರಕಾರ ಈಗಲೂ ನೂರಕ್ಕೂ ಹೆಚ್ಚುಸ್ಥಾನ ಗಳಿಸುತ್ತೇವೆ’ ಎಂದಿದ್ದರು! ದುರಂತವೆಂದರೆ ಈ ಚುನಾವಣೆಯಲ್ಲಿ ಅವರೇ ಸೋತಿದ್ದಾರಾಲ್ಲದೇ, ಇಡಿಯ ಜಿಲ್ಲೆಯಲ್ಲಿ ಬಿಜೆಪಿಗೆ ಒಂದೂ ಸ್ಥಾನ ದಕ್ಕಿಲ್ಲ. ಕಾಂಗ್ರೆಸ್ಸು ಇಷ್ಟು ಚುರುಕಾಗಿರುವಾಗ ಬಿಜೆಪಿ ಕಾರ್ಯಕರ್ತರನ್ನು ಮಾತನಾಡಿಸುವ ಗೋಜಿಗೂ ಹೋಗಲಿಲ್ಲ. ಮಾತನಾಡಿಸಿದರೆ ಎಲ್ಲಿ ಹಣ ಕೊಡಬೇಕಾಗುತ್ತದೋ ಎಂಬ ಭಯವಿರಬಹುದು. ಆದರೆ ಕಾಂಗ್ರೆಸ್ಸು ವ್ಯವಸ್ಥಿತವಾಗಿ ಕಾರ್ಯಕರ್ತರಿಗೆ ಗ್ಯಾರಂಟಿ ಕಾರ್ಡ್ ಹಂಚುವ ಕೆಲಸವನ್ನು ಕೊಟ್ಟಿತು. ಸತ್ಯವೇನು ಗೊತ್ತೇ? ಕೆಳಹಂತದ ಕಾರ್ಯಕರ್ತನಿಗೆ ಮೇಲ್ಮಟ್ಟದ ನಾಯಕರ ಮೇಲೆ ವಿಶ್ವಾಸ ಮತ್ತು ಕೈತುಂಬ ಕೆಲಸ ಇವೆರಡಿದ್ದರೆ ಸಾಕು. ಆತ ನಿಮ್ಮಿಂದ ಮತ್ತೇನನ್ನೂ ಬಯಸಲಾರ, ನಿಜಕ್ಕೂ ಮತ್ತೇನನ್ನೂ.. ಆದರೆ ಅಧಿಕಾರದಲ್ಲಿ ಕುಳಿತವರಿಗೆ ಇದು ಅರ್ಥವಾಗಲಿಲ್ಲ. ಅತ್ತ ಕಾಂಗ್ರೆಸ್ಸಿಗರು ಗ್ಯಾರಂಟಿ ಕಾರ್ಡ್​ನ ಮೂಲಕ ಕೆಳ ಮತ್ತು ಮಧ್ಯಮವರ್ಗದ ಜನರನ್ನು ತಲುಪಿದರು. ಅಚ್ಚರಿ ಏನು ಗೊತ್ತೇ? ಗ್ಯಾರಂಟಿ ಕಾರ್ಡಗಳು ಬಿಜೆಪಿ ಕಾರ್ಯಕರ್ತರ ಮನೆಯಲ್ಲೂ ಇವೆ. ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಶೈಲಿ ಅಷ್ಟು ಜೋರಾಗಿತ್ತು. ಪ್ರತಿಮನೆಗೆ ಹೋಗಿ ಅವರು ಮೀಟರ್ ನಂಬರ್​ಗಳನ್ನು ಬರೆದುಕೊಂಡು ಜೂನ್ 1ರಿಂದ ನೀವ್ಯಾರೂ ಕರೆಂಟ್ ಬಿಲ್ ಕಟ್ಟಬೇಕಿಲ್ಲ, ಎಂದು ಹೇಳಿ ಭ್ರಮಾಲೋಕವನ್ನೇ ಸೃಷ್ಟಿಸಿಬಿಟ್ಟರು. ಹಾಗಂತ ಇದ್ಯಾವುದೂ ಮೇಲ್ಮಟ್ಟದ ನಾಯಕರಿಗೆ ಗೊತ್ತಿರಲಿಲ್ಲವೆಂದಲ್ಲ. ಅವರಿಗೆ ಮೋದಿಯ ಮೇಲೆ ವಿಶ್ವಾಸವಿತ್ತು. ಮತ್ತದೇ ‘ಮೋದಿ ಬರ್ತಾರೆ, ನಾವು ಕುರ್ಚಿ ಹಿಡಿತೀವಿ..’ ಅವರಿಗೆ ಪೂರಕವಾಗಿ ಇವರದ್ದೇ ಪಟಾಲಂಗಳು ಸರ್ವೆ ನಡೆಸಿ ನೂರಕ್ಕೂ ಹೆಚ್ಚು ಸೀಟುಗಳ ಖಾತ್ರಿ ನೀಡುತ್ತಿದ್ದರಲ್ಲ, ಇನ್ನೇನು ಬೇಕು? ಸ್ವರ್ಗಕ್ಕೆ ಕಿಚ್ಚು ಹಚ್ಚೋದೊಂದೇ ಬಾಕಿ. ಅಲ್ಲಿ ಕಾಂಗ್ರೆಸ್ಸಿಗರು ಇವರ ಬುಡಕ್ಕೆ ಬೆಂಕಿ ಹಚ್ಚುತ್ತಿದ್ದರು.

    ಇತ್ತ ಬಿಜೆಪಿಯ ಪಾಡು ಹೇಗಿತ್ತು? ಹೆಚ್ಚು-ಕಡಿಮೆ ಎಲ್ಲ ಕ್ಷೇತ್ರಗಳಲ್ಲೂ ಬಂಡಾಯದ ಬಾವುಟವಿತ್ತು. ಚುನಾವಣೆಗೆ ಆರು ತಿಂಗಳ ಮುನ್ನ ಜಗದೀಶ್ ಶೆಟ್ಟರ್​ರ ಬಳಿ ಮಾತನಾಡುವಾಗ ಅವರು ಹೇಳಿದ ಮಾತು ಗುಂಯ್ಗುಡುತ್ತಿದೆ. ‘ಮೊದಲಾದರೋ ನಾವೆಲ್ಲ ಪ್ರಮುಖ ನಾಯಕರು ಸೇರಿ ಬಂಡಾಯ ಮಾಡಬಹುದಾದವರ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೆವು; ಈಗ ಯಾರೊಬ್ಬರೂ ಯಾರನ್ನೂ ಕೇಳಿಕೊಳ್ಳುತ್ತಿಲ್ಲ’ ಎಂದಿದ್ದರು. ಅಫ್ಜಲ್​ಪುರದಲ್ಲಿ ಬಂಡಾಯದ ಬಾವುಟ ಹಾರಿದರೆ ಕಷ್ಟ ಎಂಬುದನ್ನು ಪ್ರಮುಖ ನಾಯಕರ್ಯಾರೂ ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ವಿರೋಧಿಸಿ ನಿಂತವ ನಾಲ್ಕು ಸಾವಿರ ವೋಟುಗಳಿಂದ ಸೋತ ಮತ್ತು ಆತ ಚುನಾವಣೆಗೆ ನಿಂತಾಗ ಅನೇಕ ನಾಯಕರು ಆತನನ್ನು ಸಮಾಧಾನಪಡಿಸಲು ಆನಂತರ ಓಡಾಡಿದ್ದು ಹೇಸಿಗೆ ಎನಿಸುವಂತಿತ್ತು. ಹೋಗಲಿ, ಇದನ್ನೆಲ್ಲ ನಿಭಾಯಿಸಬಲ್ಲ ಸಾಮರ್ಥ್ಯ ನಳಿನ್​ಕುಮಾರ್ ಕಟೀಲರಿಗಿತ್ತೇನು? ಪಾಪ, ಅವರ ಬಗ್ಗೆ ನನಗೆ ಅನುಕಂಪವಿದೆ. ನಾಲ್ಕನೇ ತರಗತಿ ಪಾಸಾದ ಹುಡುಗನನ್ನು ಮರುದಿನದಿಂದ ಎಂಬಿಬಿಎಸ್ ಕ್ಲಾಸಿಗೆ ಕೂರಿಸಿದರೆ ಏನಾಗಬಹುದೋ, ನಳಿನ್​ರೊಂದಿಗೆ ಆಗಿದ್ದೂ ಅದೇ. ಮಂಗಳೂರಿನ ದೇವಸ್ಥಾನದ ಜೀಣೋದ್ಧಾರಗಳಿಗೆ ಹೋಗಬಹುದಾದ ವ್ಯಕ್ತಿಯನ್ನು ನೀವು ನಿಮಗಿಷ್ಟ ಎನ್ನುವ ಕಾರಣಕ್ಕೆ ರಾಜ್ಯದ ಜವಾಬ್ದಾರಿ ಕೊಟ್ಟರೆ ಮತ್ತೇನಾಗಬಹುದು ಹೇಳಿ? ಖಂಡಿತ ಅವರು ನನ್ನ ಸಜ್ಜನ ಮಿತ್ರರೇ, ಆದರೆ ಚಿನ್ನದ ಸೂಜಿ ಕಣ್ಣಿಗೆ ಚುಚ್ಚಿಕೊಳ್ಳಲಲ್ಲವಲ್ಲ! ನಳಿನ್​ಕುಮಾರರ ಎಲ್ಲ ಘಟನೆಯ ನಡುವೆ ನಾವೆಲ್ಲ ಮರೆತಿರುವ ಸಂಗತಿಯೊಂದಿದೆ. ರಾಜ್ಯದ ಯುವಮೋರ್ಚಾ ಅಧ್ಯಕ್ಷರ ಬಗ್ಗೆ ಯಾರೂ ಮಾತೇ ಆಡುತ್ತಿಲ್ಲ. ಹಾಗೊಬ್ಬ ಇದ್ದಾರೆಂದೂ ಯಾರಿಗೂ ಗೊತ್ತಿಲ್ಲ. ಪಾಪ! ಬೆಲ್​ಬಾಟಮ್ಂತಹ ಸಿನಿಮಾಗಳನ್ನು ಮಾಡಿಕೊಂಡು ತನ್ನಪಾಡಿಗೆ ತಾನಿದ್ದವನನ್ನು ಸರ್ಕಾರ ಹೊಂದಿರುವ ಪಕ್ಷವೊಂದರ ತರುಣರ ನೇತೃತ್ವ ವಹಿಸಲು ಬಿಟ್ಟಿದ್ದು ಅವನ ಆಯ್ಕೆ ಮಾಡಿದವರ ದುರಹಂಕಾರವನ್ನು ತೋರಿಸುತ್ತದೆ. ಯಾರನ್ನಾದರೂ ಆಯ್ಕೆ ಮಾಡಿ ನಾವು ಜೀರ್ಣಿಸಿಕೊಳ್ಳಬಲ್ಲೆವು ಎನ್ನುವ ಮೇಲ್ಮಟ್ಟದ ನಾಯಕರ ಈ ಪರಿಯ ಅಹಂಕಾರಕ್ಕೆ ಅಂದೇ ಮದ್ದು ಸಿಕ್ಕಿದ್ದಿದ್ದರೆ ಬಿಜೆಪಿ ಇನ್ನೊಂದು 40 ಸೀಟುಗಳನ್ನು ಹೆಚ್ಚು ಗೆದ್ದಿರುತ್ತಿತ್ತು. ಟಿವಿ ಡಿಬೆಟ್ ಒಂದರಲ್ಲಿ ಭಾಜಪದ ವಕ್ತಾರನಿಗೆ ಯುವಮೋರ್ಚಾ ಅಧ್ಯಕ್ಷನ ಹೆಸರುಹೇಳಿ ಎಂದಾಗ ಆತ ತಡಬಡಾಯಿಸಿದ್ದನ್ನು ಕಂಡು ನಾನು ನಕ್ಕಿದ್ದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಳಿನ್​ಕುಮಾರರು ಅವನಿಗಿಂತ ಒಂದು ತೂಕ ಹೆಚ್ಚು ಪ್ರಖ್ಯಾತರಾಗಿದ್ದಾರೆ ಅಷ್ಟೇ!

    ಬಿಜೆಪಿಯ ಸೋಲು ಸಹಜವೇ. ಮೋದಿಯವರ ಸಾಧನೆಯನ್ನು ಊರತುಂಬಾ ಘಂಟಾಘೊಷವಾಗಿ ಸಾರುವ ಸಾಮಾನ್ಯ ನಾಗರಿಕನಿಗೆ ರಾಜ್ಯ ಸರ್ಕಾರದ ಒಂದೇ ಒಂದು ಮನಮೆಚ್ಚುವ ಸಾಧನೆಯ ಪರಿಚಯವಿರಲಿಲ್ಲ. ಹೀಗಾಗಿ ಚುನಾವಣೆ ಎದುರಿಸಬೇಕೆಂದರೆ ಕೊನೆಯಪಕ್ಷ ಎಲ್ಲರೂ ಒಗ್ಗಟ್ಟಾಗಬೇಕಿತ್ತು. ಆದರೆ ಹೆಚ್ಚು-ಕಡಿಮೆ ಕೊನೆಯ ದಿನದವರೆಗೂ ಡಿಕೆಶಿ-ಸಿದ್ದು ಕಿತ್ತಾಡಿಕೊಳ್ಳುತ್ತಾರೆ, ನಮಗೆ ಲಾಭವಾಗುತ್ತದೆ ಎಂದು, ಮಲಬದ್ಧತೆಯಿಂದ ನರಳುತ್ತಿರುವವ ಇಂದಾದರೂ ಆರಾಮಾಗಬಹುದು ಎಂದು ಬೆಳಿಗ್ಗೆ ಎದ್ದು ಕನಸು ಕಾಣುತ್ತಾನಲ್ಲ, ಹಂಗಾಗಿತ್ತು. ಸರ್ಕಾರ ಅವರದ್ದೇ ಎಂದು ಖಾತ್ರಿಯಾದ ನಂತರವೂ ಇವರು ಈಗಲಾದರೂ ಕಿತ್ತಾಡಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದರು. ಮತ್ತೂ ಅಚ್ಚರಿಯೇನು ಗೊತ್ತೇ? ಎರಡು ವರ್ಷವಾದ ನಂತರವಾದರೂ ಇವರಿಬ್ಬರೂ ಕಿತ್ತಾಡಿಕೊಂಡು ಇವರ ಸರ್ಕಾರ ಬೀಳುತ್ತದೆ ಎಂದು ಅನೇಕರು ಕನಸು ಕಾಣುತ್ತಿದ್ದಾರೆ! 2024ರವರೆಗಾದರೂ ಅವರಿಬ್ಬರ ಕಿತ್ತಾಟ ನಡೆಯುವುದಿಲ್ಲ. ಅವರಿಗಿರುವ ಗುರಿ ಒಂದೇ, ಮೋದಿಯನ್ನು ಅಲ್ಲಿಂದ ಕಿತ್ತೊಗೆಯಬೇಕು. ಅದಕ್ಕಾಗಿ ಅವರು ಏನನ್ನಾದರೂ ತ್ಯಾಗಮಾಡಲು ಸಿದ್ಧ. ಕಾಂಗ್ರೆಸ್ಸು ಅಗತ್ಯಬಿದ್ದರೆ ಡಿಕೆ ಶಿವಕುಮಾರರನ್ನೂ ತ್ಯಾಗ ಮಾಡಬಹುದು. ಅವರ ಗುರಿ ಸ್ಪಷ್ಟವಾಗಿದೆ. ನಾವೇ ಎಡವುತ್ತಿದ್ದೇವೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಇಷ್ಟೂ ದಿನಗಳ ಕಾಲ ಬಿಜೆಪಿಯ ಸರ್ವೆ ಮಾಡಿದವರನ್ನು ಕಸದಬುಟ್ಟಿಗೆಸೆದು ಅವರಿಗೆ ಕೊಟ್ಟ ಹಣವನ್ನು ಮರಳಿ ಪಡೆಯಬೇಕಿದೆ. ಇನ್ನಾದರೂ ಈ ಸರ್ವೆ ಎಂಬ ಮಹಾಮೌಢ್ಯದೊಳಗೆ ಬೀಳದೇ ಜನರ ಬಳಿ ಧಾವಿಸಬೇಕಿದೆ. ಮೋದಿಅಲೆಯಲ್ಲಿ ಗೆದ್ದುಬಿಡುತ್ತೇವೆ ಎಂಬ ಭ್ರಮೆಗೆ ಇನ್ನು ಅವಕಾಶವಿಲ್ಲ. ಕೆಲಸ ಮಾಡದ ಸಂಸದರನ್ನು ಮುಲಾಜಿಲ್ಲದೇ ಬದಿಗೆ ಸರಿಸಿ, ಈಗಿಂದಲೇ ಹೊಸವ್ಯಕ್ತಿಗೆ ಕ್ಷೇತ್ರ ಅಡ್ಡಾಡಲು ಪಕ್ಷ ಸೂಕ್ಷ್ಮವಾಗಿ ತಿಳಿಹೇಳಬೇಕಿದೆ. ಅನೇಕ ಹೊಸಬರು ಈ ಬಾರಿ ಸೋಲಲು ಕಾರಣವೇ ಅವರ ಪರಿಚಯಕ್ಕೆ ಸಾಕಷ್ಟು ಸಮಯ ಸಿಗದೇ ಇದ್ದುದು. ಹನುಮನಿಗೆ ಈ ನಾಡಿನಲ್ಲಿ ಸಾಕಷ್ಟು ಅವಮಾನ ಮಾಡಿದ್ದೇವೆ. ಇಷ್ಟೆಲ್ಲ ವ್ಯವಸ್ಥಿತವಾಗಿ ಚುನಾವಣಾ ರಣತಂತ್ರ ರೂಪಿಸಿದ ಕಾಂಗ್ರೆಸ್ಸು ಬಜರಂಗದಳವನ್ನು ಬ್ಯಾನ್ ಮಾಡುವ ಖೆಡ್ಡಾ ತೋಡಿದೆ ಎಂಬ ಸಾಮಾನ್ಯಜ್ಞಾನವೂ ನಮ್ಮ ನಾಯಕರುಗಳಲ್ಲಿರಲಿಲ್ಲ ಎನ್ನುವುದು ದುರಂತ. ಕೊನೆಯ ಮೂರ್ನಾಲ್ಕು ದಿನಗಳಲ್ಲಿ ನಾವು ಕೂಗಿದ ಬಜರಂಗ ಬಲಿ ಘೊಷಣೆಗಳು ಬಿಟ್ಟಿಭಾಗ್ಯಗಳ ಕನಸು ಕಾಣುತ್ತಿದ್ದ ಹಿಂದೂಗಳನ್ನು ಒಟ್ಟು ಮಾಡಿತೋ ಇಲ್ಲವೋ ಗೊತ್ತಿಲ್ಲ. ಆದರೆ ಗಜ್ವಾ-ಎ-ಹಿಂದ್​ನ ಕನಸು ಕಾಣುತ್ತಿದ್ದ ಮುಸಲ್ಮಾನರನ್ನಂತೂ ಒಟ್ಟುಮಾಡಿಬಿಟ್ಟಿತು. ಎಸ್​ಡಿಪಿಐ ಅಘೊಷಿತವಾಗಿ ಕಣದಿಂದ ಹಿಂದೆ ಸರಿಯಿತು. ಜೆಡಿಎಸ್​ನ ವೇಗ ಕುಸಿದುಹೋಯ್ತು. ಸಿ.ಟಿ. ರವಿ ಮೂರ್ಖತನದ ಹೇಳಿಕೆ ಕೊಟ್ಟಿದ್ದರಲ್ಲ, ಈ ಚುನಾವಣೆ ಬಜರಂಗಬಲಿ ಮತ್ತು ಭಯೋತ್ಪಾದಕರ ನಡುವಿನದ್ದು ಎಂದು, ಅದಕ್ಕೆ ಸಿಕ್ಕ ಉತ್ತರವನ್ನು ಏನೆಂದು ಅರ್ಥೈಸಿಕೊಳ್ಳಬೇಕೋ ನನಗಂತೂ ಗೊತ್ತಿಲ್ಲ. ಆದರೆ ರಾಜ್ಯದ ಅನೇಕರು ಇದಕ್ಕೆ ಉತ್ತರಿಸಲು ಕಾಯುತ್ತಿದ್ದಾರೆ. ಅವರನ್ನು ಸಮರ್ಥವಾಗಿ ಮುಂದೊಯ್ಯಬಲ್ಲ ನಾಯಕತ್ವ ಬೇಕಾಗಿದೆ ಅಷ್ಟೇ. ತರುಣರನ್ನು ಪಕ್ಷಕ್ಕೆ ಸೆಳೆಯಬಲ್ಲ, ರಾಷ್ಟ್ರನಿಷ್ಠೆಯತ್ತ ಸಮಾಜವನ್ನು ಒಯ್ಯಬಲ್ಲ, ಜಾತಿ-ಮತ-ಪಂಥಗಳಿಂದ ಮೇಲೆದ್ದು ನಾಡಿನ ಹಿತಕ್ಕಾಗಿ ಮತ ಚಲಾಯಿಸಬಲ್ಲ ಮಂದಿಯನ್ನು ರೂಪಿಸುವ ನಾಯಕ ಬೇಕಾಗಿದ್ದಾನೆ. ಕಾಂಗ್ರೆಸ್ಸಿಗರು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿ ವೋಟಿಗಾಗಿ ಯಾವ ಮಟ್ಟಕ್ಕೆ ಇಳಿಯಬಲ್ಲರು ಎಂಬುದನ್ನು ಮನವರಿಕೆ ಮಾಡಿಕೊಡಬಲ್ಲ ಸಮರ್ಥ ನಾಯಕತ್ವ ಬೇಕಿದೆ. ಮತ್ತದೇ ದುರಹಂಕಾರಕ್ಕೆ, ಧಿಮಾಕುಗಳಿಗೆ ಶರಣಾದರೆ 2024 ಹರಿವಾಣದಲ್ಲಿಟ್ಟು ಕಾಂಗ್ರೆಸ್ಸಿನ ಬುಡಕ್ಕೆರೆದಂತೆ ಮತ್ತು ಮೋದಿಯ ಬಹುಮತದ ಹಾದಿಗೆ ನಾವು ಅಡ್ಡಗಾಲು ಹಾಕಿದಂತೆ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಂದು ನಿರ್ಧಾರ; ಇದು ಎಲ್ಲ ಕಡೆಗೂ ಅನ್ವಯ ಎಂದ ಸಿಎಂ

    ಹೊಸ ಮನೆ ತೋರಿಸಲೆಂದು ಕುಟುಂಬಸ್ಥರನ್ನು ಕರೆದಾಕೆ, ಅವರ ಕಣ್ಮುಂದೆಯೇ ಸಾವಿಗೀಡಾದ್ಲು!; ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts