ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ 'ಇಡ್ಲಿ-ಸಾಂಬಾರ್' ಕಾರಣ: ಶಾಸಕ ಮೈಕೆಲ್ ಲೋಬೊ | Idli-Sambar

ವಿಜಯವಾಣಿ - 2025-02-27T214144.559
Published on

Idli-Sambar: ಕಡಲ ತೀರಗಳಲ್ಲಿ ಲಭ್ಯವಿರುವ ಇಡ್ಲಿ ಮತ್ತು ಸಾಂಬಾರ್ ಮಾರಾಟವು ಗೋವಾದಲ್ಲಿನ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ ಎಂದು ಗೋವಾ ಬಿಜೆಪಿ ಶಾಸಕ ಮೈಕೆಲ್ ಲೋಬೊ ಹೇಳಿದ್ದಾರೆ.

ಇಂದು ಉತ್ತರ ಗೋವಾದ ಕ್ಯಾಲಂಗುಟ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೋಬೊ, "ಕರಾವಳಿ ರಾಜ್ಯಕ್ಕೆ ಕಡಿಮೆ ವಿದೇಶಿಗರ ಭೇಟಿ ಇದೆ ಎಂಬ ಕಾರಣಕ್ಕೆ ಕೇವಲ ಸರ್ಕಾರವನ್ನು ದೂಷಿಸಿಲು ಸಾಧ್ಯವಿಲ್ಲ. ಅದರೊಂದಿಗಿರುವ ಎಲ್ಲಾ ಪಾಲುದಾರರು ಸಮಾನವಾಗಿ ಈ ಜವಾಬ್ದಾರಿಯನ್ನು ಹೊರಬೇಕು" ಎಂದು ಒತ್ತಿ ಹೇಳಿದರು.

"ಗೋವಾ ನಿವಾಸಿಗಳು ಸಮುದ್ರ ತೀರದಲ್ಲಿರುವ ತಮ್ಮ ಹೋಟೆಲ್​, ಉದ್ಯಮ ಸ್ಥಳಗಳನ್ನು ಇತರೆ ರಾಜ್ಯಗಳ ಜನರಿಗೆ ಬಾಡಿಗೆ ನೀಡಿದ್ದಾರೆ. ಬೆಂಗಳೂರಿನ ಕೆಲವರು ಇಂತಹ ಸ್ಥಳಗಳಲ್ಲಿ ವಡಾ ಪಾವ್ ಮಾರುತ್ತಾ ವ್ಯವಹಾರ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕುಸಿಯುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.

ಆದಾಗ್ಯೂ, ದಕ್ಷಿಣ ಭಾರತದ ಜನಪ್ರಿಯ ಉಪಾಹಾರ ಖಾದ್ಯವು ತಮ್ಮ ರಾಜ್ಯದ ಪ್ರವಾಸೋದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಶಾಸಕರು ಹೆಚ್ಚೇನು ಹೇಳಿಲ್ಲ. ಈ ಕುರಿತಂತೆ ಯಾವುದೇ ರೀತಿಯಲ್ಲೂ ವಿವರಣೆ ನೀಡುವ ಪ್ರಯತ್ನಕ್ಕೆ ಅವರು ಮುಂದಾಗಲಿಲ್ಲ.

"ಪ್ರವಾಸಿಗರ ಸಂಖ್ಯೆಯಲ್ಲಿನ ಕುಸಿತದಿಂದಾಗಿ ಗದ್ದಲ ಮತ್ತು ಕೂಗುಗಳು ಕೇಳಿಬಂದಿವೆ. ಕರಾವಳಿ ಪ್ರದೇಶದಲ್ಲಿ, ಅದು ಉತ್ತರ ಅಥವಾ ದಕ್ಷಿಣ ಆಗಿರಲಿ, ವಿದೇಶಿ ಪ್ರವಾಸಿಗರ ಆಗಮನದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಇದಕ್ಕೆ ಹಲವು ಅಂಶಗಳು ಕಾರಣ. ಎಲ್ಲಾ ಪಾಲುದಾರರು ಇದರ ಹೊಣೆ ಹೊರಬೇಕು. ಪ್ರತಿ ವರ್ಷ ವಿದೇಶಿಯರು ಗೋವಾಕ್ಕೆ ಭೇಟಿ ನೀಡುತ್ತಾರೆ, ಆದರೆ, ವಿದೇಶಗಳಿಂದ ಬರುವ ಯುವ ಪ್ರವಾಸಿಗರು ರಾಜ್ಯದಿಂದ ದೂರ ಹೋಗುತ್ತಿದ್ದಾರೆ" ಎಂದರು.

"ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಪಾಲುದಾರರು ಜಂಟಿ ಸಭೆ ನಡೆಸಿ ವಿದೇಶಿ ಪ್ರವಾಸಿಗರು ಏಕೆ ಗೋವಾಕ್ಕೆ ಬರಲು ಸಿದ್ಧರಿಲ್ಲ ಎಂಬ ಕಾರಣಗಳನ್ನು ಅರಿಯಬೇಕು. ಯುದ್ಧದ ಕಾರಣದಿಂದಾಗಿ, ರಷ್ಯಾ ಮತ್ತು ಉಕ್ರೇನಿಯನ್ ಪ್ರವಾಸಿಗರು ಗೋವಾದತ್ತ ಮುಖ ಮಾಡುತ್ತಿಲ್ಲ. ಹಿಂದಿನ ಯುಎಸ್ಎಸ್ಆರ್ ದೇಶಗಳ ಪ್ರವಾಸಿಗರು ಕೂಡ ಗೋವಾಕ್ಕೆ ಆಗಮಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ" ಎಂದು ಲೋಬೊ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net