

ನವದೆಹಲಿ: ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್ನ ಪ್ರತಿದಾಳಿಯಿಂದಾಗಿ ಅಲ್ಲಿ ರಣಭೀಕರ ಪರಿಸ್ಥಿತಿ ಉಂಟಾಗಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ತಿಳಿಯಾಗಿಲ್ಲ. ಈ ಮಧ್ಯೆಯೇ ಅವಘಡವೊಂದು ನಡೆದುಹೋಗಿದೆ ಎಂಬುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಇಸ್ರೇಲ್ನ ರಕ್ಷಣಾ ಪಡೆಯ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಈ ವಿಷಯ ಬಹಿರಂಗಪಡಿಸಲಾಗಿದೆ. 'ಸ್ವಲ್ಪ ಸಮಯದ ಮೊದಲು ಹೀಗಾಯಿತು..' ಎಂದು 9 ಗಂಟೆಯ ಸುಮಾರಿಗೆ ಇಸ್ರೇಲ್ ಡಿಫೆನ್ಸ್ ಫೋರ್ಸಸ್ನ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಕೆರೆಮ್ ಶಲೊಮ್ ಪ್ರದೇಶದ ಗಡಿಭಾಗದಲ್ಲಿ ಇರುವ ಈಜಿಪ್ಟಿಯನ್ ಪೋಸ್ಟ್ ಮೇಲೆ ಇಸ್ರೇಲ್ ರಕ್ಷಣಾ ಪಡೆಯ ಟ್ಯಾಂಕ್ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ಅಪ್ಪಳಿಸಿದೆ. ಈ ಪ್ರಕರಣದ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಾದಿಸುತ್ತೇವೆ ಎಂಬುದಾಗಿ ಈ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಹೇಳಿಕೊಳ್ಳಲಾಗಿದೆ.
ಸರಿಯಾಗಿ ಎರಡು ವಾರಗಳ ಹಿಂದೆ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದು, ಆ ನಂತರದ ಎರಡು ವಾರಗಳಲ್ಲಿ ಏನಾಯ್ತು ಎಂಬ ಝಲಕ್ ಕುರಿತ ವಿಡಿಯೋವೊಂದನ್ನೂ ಐಡಿಎಫ್ ಎರಡು ಗಂಟೆಗಳ ಹಿಂದೆ ಹಂಚಿಕೊಂಡಿದೆ.