

Jasprit Bumrah : ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಂದು ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಜನಾಂಗೀಯ ನಿಂದನೆ ಮಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಮಹಿಳಾ ಕ್ರಿಕೆಟರ್ ಹಾಗೂ ವೀಕ್ಷಕ ವಿವರಣೆಗಾರ್ತಿ ಇಶಾ ಗುಹಾ ಬುಮ್ರಾ ಬಳಿ ಕ್ಷಮೆಯಾಚಿಸಿದ್ದಾರೆ.
ಭಾನುವಾರ (ಡಿ.15) ಬೆಳಗ್ಗೆ ಬುಮ್ರಾ ಬೇಗನೆ ಎರಡು ವಿಕೆಟ್ಗಳನ್ನು ಕಬಳಿಸಿದ ಬಳಿಕ ಅವರ ಬಗ್ಗೆ ಮೆಚ್ಚುಗೆ ಸೂಚಿಸುವ ಭರದಲ್ಲಿ ಇಶಾ, “ಪ್ರೈಮೇಟ್’ (ವಾನರ, ಸಸ್ತನಿ ಪ್ರಾಣಿ) ಎಂದು ಕರೆದರು. ನಿನ್ನೆ ಬೆಳಗ್ಗೆ 5 ಓವರ್ಗಳಲ್ಲಿ 4 ರನ್ಗಳಿಗೆ 2 ವಿಕೆಟ್ ಕಬಳಿಸಿದ ಬಗ್ಗೆ “ಫಾಕ್ಸ್ ಸ್ಪೋರ್ಟ್ಸ್’ ಚಾನಲ್ನ ಕಾಮೆಂಟರಿ ಬಾಕ್ಸ್ನಲ್ಲಿ ಮಾಜಿ ವೇಗಿ ಬ್ರೆಟ್ ಲೀ, ಇಶಾ ಅಭಿಪ್ರಾಯ ಕೇಳಿದರು. ಆಗ ಇಶಾ, “ಬುಮ್ರಾ ಅವರೊಬ್ಬ ಅತ್ಯಂತ ಅಮೂಲ್ಯವಾದ ಫ್ರೈಮೇಟ್’ ಎಂದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಇಶಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪಗಳನ್ನು ಮಾಡಿದರು.
ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಇದೀಗ ಕ್ಷಮೆಯಾಚಿಸಿರುವ ಇಶಾ, ನಿನ್ನೆ ನಾನೊಂದು ಪದ ಬಳಸಿದ್ದೆ. ಅದು ಭಾರಿ ಟೀಕೆಗೆ ಕಾರಣವಾಯಿತು. ಆ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಾನೆಂದಿಗೂ ಇತರರ ಘನತೆಗೆ ಧಕ್ಕೆ ತರುವಂತೆ ವರ್ತಿಸುವುದಿಲ್ಲ. ನಾನು ಮಾತನಾಡಿರುವ ಸಂಪೂರ್ಣ ಮಾತುಗಳನ್ನು ಕೇಳಿದರೆ, ನಾನು ಬುಮ್ರಾ ಅವರ ಮೇಲೆ ಹೊಗಳಿಕೆಯ ಸುರಿಮಳೆಗೈದಿರುವುದು ಗೊತ್ತಾಗುತ್ತದೆ ಎಂದು ಇಶಾ ಸ್ಪಷ್ಟನೆ ನೀಡಿದರು.
ನಾನೆಂದಿಗೂ ಭಾರತದ ಶ್ರೇಷ್ಠ ಆಟಗಾರರನ್ನು ಕಡಿಮೆ ಅಂದಾಜು ಮಾಡುವುದಿಲ್ಲ. ನಾನು ಯಾವಾಗಲೂ ಕ್ರಿಕೆಟ್‌ಗಾಗಿ ಶ್ರಮಿಸುವವರ ಪರವಾಗಿ ನಿಲ್ಲುತ್ತೇನೆ. ಜಸ್ಪ್ರೀತ್ ಬುಮ್ರಾ ಅವರನ್ನು ಹೊಗಳುವಾಗ ನಾನು ತಪ್ಪು ಪದವನ್ನು ಬಳಸಿದ್ದೇನೆಂದು ಭಾವಿಸುತ್ತೇನೆ. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಇಶಾ ಅವರ ಸ್ಪಷ್ಟನೆಯನ್ನು ಕೇಳಿದ ಬುಮ್ರಾ ಅಭಿಮಾನಿಗಳು ಸ್ವಲ್ಪಮಟ್ಟಿಗೆ ಸಮಾಧಾನಗೊಂಡಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಶನಿವಾರದ ಮೊದಲ ದಿನದ ಆಟ ಮಳೆಯಿಂದಾಗಿ ರದ್ದಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯರು 13.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದರು. ಭಾನುವಾರ ಎರಡನೇ ದಿನದ ಆಟ ಸುಗಮವಾಗಿ ಸಾಗಿತು. ಟ್ರಾವಿಸ್ ಹೆಡ್ ಅವರ ಬೃಹತ್ ಶತಕ (152) ಮತ್ತು ಸ್ಟೀವ್ ಸ್ಮಿತ್ (101) ಅವರ ಶತಕ ಆಸೀಸ್ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದಿತು. 10 ವಿಕೆಟ್ ನಷ್ಟಕ್ಕೆ 445 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಭಾರತದ ಬೌಲರ್‌ಗಳಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್ ಪಡೆದರು. ನಿತೀಶ್ ಕುಮಾರ್ ರೆಡ್ಡಿ ಹಾಗೂ ಆಕಾಶ್ ದೀಪ್ ತಲಾ ಒಂದು ವಿಕೆಟ್ ಗಳಿಸಿದರು.
ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಮಧ್ಯಾಹ್ನ 12 ಗಂಟೆ ವೇಳೆಗೆ ಕೇವಲ 48 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಯಶಸ್ವಿ ಜೈಸ್ವಾಲ್ (4), ಶುಭಮನ್ ಗಿಲ್ (1), ವಿರಾಟ್ ಕೊಹ್ಲಿ (3) ಮತ್ತು ರಿಷಭ್ ಪಂತ್ (9) ವಿಕೆಟ್ ಕಳೆದುಕೊಂಡಿದೆ. ಸದ್ಯ ಮಳೆಯ ಕಾರಣದಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ಸದ್ಯ ಕೆ.ಎಲ್. ರಾಹುಲ್ ಮತ್ತು ನಾಯಕ ರೋಹಿತ್ ಶರ್ಮ ಕ್ರೀಸ್ನಲ್ಲಿದ್ದಾರೆ. (ಏಜೆನ್ಸೀಸ್)