ಕೊವಿಡ್​-19ನಿಂದ ನರಳಿ ಮೃತಪಟ್ಟ ಪತ್ರಕರ್ತನ ಕೊನೇ ಸಂದೇಶ ನೋಡಿ ಸಾರ್ವಜನಿಕರು ಕೆಂಡಾಮಂಡಲ...

Covid
Published on

ಹೈದರಾಬಾದ್: ಇಲ್ಲಿನ 39 ವರ್ಷದ ಪತ್ರಕರ್ತನೋರ್ವ ಕೊವಿಡ್​-19ನಿಂದ ಮೃತಪಟ್ಟಿದ್ದಾರೆ. ಈ ಪತ್ರಕರ್ತನಿಗೆ ಕರೊನಾದಿಂದ ತೀವ್ರ ಉಸಿರಾಟದ ತೊಂದರೆಯಾಗಿತ್ತು. ಹೈದರಾಬಾದ್​ನ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಹೋದರೂ ಅದೆಷ್ಟೋ ಹೊತ್ತು ಅಡ್ಮಿಟ್​ ಆಗಲು ಬೆಡ್​ ಸಿಗಲಿಲ್ಲ. ಆತ ಕುಳಿತು, ಉಸಿರಾಡಲಾಗದೆ ಸಂಕಟ ಪಡುತ್ತಿದ್ದರೆ, ಆತನ ಕುಟುಂಬದವರು ಸಹಾಯಕ್ಕಾಗಿ ಅತ್ತಿಂದತ್ತ ಓಡಾಡುತ್ತಿದ್ದರು. ಹೇಗಾದರೂ ಅವನನ್ನು ಬದುಕಿಸಿಕೊಡಿ, ಚಿಕಿತ್ಸೆ ನೀಡಿ ಎಂದು ಗೋಗರೆಯುತ್ತಿದ್ದರು.

ಕೊವಿಡ್​-19ಗೆ ತುತ್ತಾಗಿ, ಆಸ್ಪತ್ರೆಯಲ್ಲಿ ಕುಳಿತ ಈ ಪತ್ರಕರ್ತ ಅದು ಹೇಗೋ, ತನ್ನ ಮಾಧ್ಯಮದ ಕೆಲವು ಪರಿಚಿತರಿಗೆ, ಸೀನಿಯರ್​ಗಳಿಗೆ ಕರೆ ಮಾಡಿ ಅಂತೂ ಇಂತೂ ಆಸ್ಪತ್ರೆಯ ಐಸಿಯು ವಾರ್ಡ್​ಗೆ ದಾಖಲಾದ. ಆದರೆ ಏನೇನೂ ಪ್ರಯೋಜನ ಆಗಲಿಲ್ಲ. ಐಸಿಯು ಸೇರಿದ ಕೆಲವೇ ಗಂಟೆಯಲ್ಲಿ ಸಾವನ್ನಪ್ಪಿದ.

ಆದರೆ ಆತ ಐಸಿಯುಗೆ ಹೋಗುತ್ತಿದ್ದಂತೆ ತನ್ನ ಸಹೋದರನಿಗೆ ಕೊನೇ ಬಾರಿಗೆ ಒಂದು ಮೆಸೇಜ್​ ಕಳಿಸಿದ್ದ. ಈ ಐಸಿಯು ಸ್ವಲ್ಪವೂ ಚೆನ್ನಾಗಿಲ್ಲ. ಪ್ಲೀಸ್​ ಪ್ರೈವೇಟ್​ ಆಸ್ಪತ್ರೆಗೆ ಹೋಗೋಣ...ಆಗಿನಿಂದಲೂ ಉಸಿರಾಟಕ್ಕೆ ಸಮಸ್ಯೆಯಾಗುತ್ತಿದೆ ನನಗೆ. ಇವರು ಐಸಿಯುಗೆ ಕರೆದುಕೊಂಡು ಬಂದರೂ ಆಕ್ಸಿಜನ್​ ಕೊಡುತ್ತಿಲ್ಲ ಎಂದು ಸಂದೇಶದಲ್ಲಿ ತಿಳಿಸಿದ್ದ.

ಪತ್ರಕರ್ತ ಸಾವನ್ನಪ್ಪುತ್ತಿದ್ದಂತೆ ಈ ಘಟನೆಯ ಬಗ್ಗೆ ಆತನ ಕುಟುಂಬದವರು ಹೇಳಿದ್ದಾರೆ. ವಿಡಿಯೋವೊಂದನ್ನೂ ರಿಲೀಸ್ ಮಾಡಿದ್ದಾರೆ. ಹಾಗೇ ಪತ್ರಕರ್ತ ಐಸಿಯುನಿಂದ ಕಳಿಸಿದ ಕೊನೇ ಮೆಸೇಜ್​ನ್ನು ಕೂಡ ಬಹಿರಂಗಪಡಿಸಿದ್ದಾರೆ. ಇದೀಗ ಗಾಂಧಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಏನೇನಾಯಿತು ಎಂಬ ಬಗ್ಗೆ ಮೃತ ಪತ್ರಕರ್ತನ ಸಹೋದರ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನನ್ನ ಸೋದರ ಉಸಿರಾಟದ ಸಮಸ್ಯೆಯಿಂದ ನರಳಾಡುತ್ತಿದ್ದಾಗ ನಾನು ಸಹಾಯಕ್ಕಾಗಿ ವೈದ್ಯರ ಬಳಿ ಓಡಿದೆ. ಆದರೆ ಆ ಹೊತ್ತಲ್ಲಿ ಯಾವ ವೈದ್ಯರೂ ಇರಲಿಲ್ಲ. ಸಹಾಯಕ್ಕಾಗಿ ಅಲ್ಲಿನ ಸಿಬ್ಬಂದಿಯನ್ನೂ ಬೇಡಿಕೊಂಡೆ ಅವರು ತಕ್ಷಣಕ್ಕೆ ಸ್ಪಂದಿಸಲು ಸಿದ್ಧರಾಗಿರಲಿಲ್ಲ. ಮರುದಿನ ಬೆಳಗ್ಗೆವರೆಗೆ ಕಾಯಿರಿ ಎಂದು ಹೇಳಿದರು ಎಂದು ದೂರಿದ್ದಾರೆ.

ತುಂಬ ಹೊತ್ತು ಆತ ಹಾಗೇ ನರಳಾಡಿ, ಕೊನೆಗೆ ಅವನ ಗೆಳೆಯರ ಸಹಾಯದಿಂದ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದ ನಂತರವಷ್ಟೇ ಐಸಿಯುಗೆ ದಾಖಲಾದ. ಆದರೆ ಅಲ್ಲಿನ ವ್ಯವಸ್ಥೆ ಸರಿಯಿಲ್ಲದೆ ಜೀವ ಕಳೆದುಕೊಂಡ ಎಂದು ತಿಳಿಸಿದ್ದಾರೆ.

ಗಾಂಧಿ ಆಸ್ಪತ್ರೆಯಲ್ಲಿ 2,000 ರೋಗಿಗಳನ್ನು ಅಡ್ಮಿಟ್ ಮಾಡಬಹುದು. ಸದ್ಯ 247 ಮಂದಿ ಮಾತ್ರ ಕರೊನಾ ರೋಗಿಗಳು ಇದ್ದಾರೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net