ಚಿಕ್ಕಬಳ್ಳಾಪುರ: ನಾನು ಹಾಕಿದ್ದ ಸವಾಲನ್ನು ಸುಧಾಕರ್ ಅವರು ಸ್ವೀಕರಿಸಲಿಲ್ಲ. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಪ್ರದೀಪ್ ಈಶ್ವರ್, ರಾಜೀನಾಮೆಗೆ ಆಗ್ರಹಿಸಿದ ವಿರೋಧ ಪಕ್ಷದವರಿಗೆ ಧನ್ಯವಾದ. ಸುಧಾಕರ್ ಅವರು ನನ್ನ ಸವಾಲು ಸ್ವೀಕಾರ ಮಾಡಿರಲಿಲ್ಲ. ನನ್ನ ಸವಾಲು ಸ್ವೀಕರಿಸಿದ್ದರೆ ನಾನು ರಾಜೀನಾಮೆ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ. ಬಿಜೆಪಿಯವರು ನಾನು ರಾಜೀನಾಮೆ ಕೊಡಬಹುದು ಎಂದು ಕಾಯ್ತಿದ್ದಾರೆ. ನಾನು ರಾಜೀನಾಮೆ ಕೊಟ್ರೆ ನೆಮ್ಮದಿಯಾಗಿ ಇರಬಹುದು ಅಂದುಕೊಂಡಿದ್ದಾರೆ. ಆದರೆ ನಾನು ಅವರಿಗೆ ಯಾವುದೇ ಕಾರಣಕ್ಕೂ ನೆಮ್ಮದಿ ಕೊಡುವುದಿಲ್ಲ.
ಇದನ್ನೂ ಓದಿ: ಕಳಪೆ ಪ್ರದರ್ಶನ ನೀಡಿದ ಪಾಕ್ ವಿರುದ್ಧ ಕೇಸ್ ದಾಖಲು
ಸುಧಾಕರ್ ಅವರಿಗೆ ಜನಾಭಿಪ್ರಾಯ ಸಿಕ್ಕಿದೆ. ಸಂಸದರಾಗಿರುವುದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಸುಧಾಕರ್ ಅವರು ಒಳ್ಳೆಯ ಕೆಲಸ ಮಾಡಿಕೊಂಡು ಹೋಗಲಿ.ರಾಜಕೀಯದಲ್ಲಿ ನಾವೆಲ್ಲ ಒಂದೇ ಎಂದು ಹೇಳಿದ್ದಾರೆ. ಈ ಮೂಲಕ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರದೀಪ್ ಈಶ್ವರ್ ಹೇಳಿದ್ದೇನು?
ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ 20 ಸಾವಿರಕ್ಕೂ ಅಧಿಕ ಲೀಡ್ ಪಡೆದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಮತ್ತು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಎಂಎಲ್ಎ ಪ್ರದೀಪ್ ಈಶ್ವರ್ ಸವಾಲೆಸೆದಿದ್ದರು.
ಇದಾದ ಬಳಿಕ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಮತಗಳನ್ನು ಲೀಡ್ ಪಡೆದಿದ್ದರು. ಇದು ಸುಧಾಕರ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದರ ಬೆನ್ನಲ್ಲೇ ಪ್ರದೀಪ್ ಈಶ್ವರ್ಗೆ ರಾಜೀನಾಮೆ ನೀಡುವಂತೆ ಆಗ್ರಹ ಕೇಳಿ ಬಂದಿತ್ತು.