ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೂ ವಿವಾದಗಳಿಗೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುವ ಪಾಕಿಸ್ತಾನ ಇದೀಗ ಸಂಕಷ್ಟ ಒಂದಕ್ಕೆ ಸಿಲುಕಿದೆ. ಇದಕ್ಕೆ ಮುಖ್ಯ ಕಾರಣ ತಂಡದ ಕಳಪೆ ಪ್ರದರ್ಶನ ಎಂದು ಹೇಳಬಹುದಾಗಿದೆ. ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಹೀನಾಯವಾಗಿ ಸೋಲುತ್ತಿರುವುದು. ಅದು ಕೂಡ ಐರ್ಲೆಂಡ್, ಯುಎಸ್ಎನಂತಹ ತಂಡಗಳ ವಿರುದ್ಧ ಎಂಬುದು ಪಾಕ್ಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ಸದಾ ಪಾಕ್ ತಂಡದ ಮೇಲೆ ಒಂದಿಲ್ಲೊಂದು ಸಂಕಷ್ಟಗಳು ನಿರಂತರ ದಾಳಿ ಇಡುತ್ತಿವೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಯುಎಸ್ಎ ಹಾಗೂ ಭಾರತದ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೈ ಅಭ್ಯರ್ಥಿಯಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ರಾ ನಟ ದರ್ಶನ್?; ಹೊಸ ಟ್ವಿಸ್ಟ್ ಕೊಟ್ಟ ಯೋಗೇಶ್ವರ್!
ಹಾಲಿ ರನ್ನರ್ಅಪ್ ಆಗಿ ಈ ಬಾರಿಯ ಚುಟುಕು ವಿಶ್ವ ಸಮರವನ್ನು ಆರಂಭಿಸಿದ ಪಾಕಿಸ್ತಾನ ತಂಡವು ಕಳಪೆ ಪ್ರದರ್ಶನ ನೀಡುವ ಮೂಲಕ ಸೂಪರ್-8 ಪ್ರವೇಶಿಸುವುದು ಅನುಮಾನ ಎಂದು ಹೇಳಲಾಗಿದೆ. ಆಡಿದ ಮೊದಲ ಎರಡು ಪಂದ್ಯಗಳಲ್ಲೂ ಸೋತ ಪಾಕ್ ಪಡೆ ಇದೀಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಅದರಲ್ಲೂ ಕ್ರಿಕೆಟ್ ಶಿಶು ಅಮೆರಿಕ ಹಾಗೂ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕ್ ತಂಡದ ಸೋಲು ಅದರ ಅಭಿಮಾನಿಗಳಿಗೆ ಆಘಾತ ನೀಡಿದೆ. ಹೀಗಾಗಿ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಕೀಲರೊಬ್ಬರು ಕೋಚ್ ಮತ್ತು ಇತರ ಸಿಬ್ಬಂದಿ ಸೇರಿದಂತೆ ಎಲ್ಲಾ ಆಟಗಾರರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದಾರೆ. ಇಡೀ ತಂಡ ದೇಶಕ್ಕೆ ದ್ರೋಹ ಬಗೆದಿದೆ. ಇದಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ತಮಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ. ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಇನ್ನಷ್ಟೇ ನಡೆಸಬೇಕಿದ್ದು, ಅರ್ಜಿದಾರರ ಮನವಿಯನ್ನು ಪುರಸ್ಕರಿಸುತ್ತ ಅಥವಾ ತಿರಸ್ಕರಿಸುತ್ತ ಎಂದು ಕಾದು ನೋಡಬೇಕಿದೆ.