

Teachers : ಚೀನಾದ ಡೆಲಿವರಿ ಯುವಕನೊಬ್ಬ ಕಣ್ಣೀರು ಹಾಕುತ್ತಿರುವ ಹೃದಯವಿದ್ರಾವಕ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಚೀನಾದ ಯುವಕ ತನ್ನ ಜೀವನದಲ್ಲಿ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾನೆ. ಓದುವ ಸಮಯದಲ್ಲಿ ಓದಿನ ಬಗ್ಗೆ ಗಮನ ಹರಿಸದೇ ಅರ್ಧಕ್ಕೆ ಶಾಲೆ ಬಿಟ್ಟು ಬಂದಿದ್ದರಿಂದ ಉತ್ತಮ ಕೆಲಸ ಸಿಗದೇ, ಡೆಲಿವರಿ ಬಾಯ್ ಆಗಿ ತಾನು ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಬಗ್ಗೆ ಕಣ್ಣೀರು ಹಾಕುತ್ತಾ ಯುವಕ ಬಹಿರಂಗವಾಗಿ ಮಾತನಾಡಿದ್ದಾನೆ.
ನಾನು ವಿಶ್ರಾಂತಿ ಇಲ್ಲದೆ ನಿರಂತರವಾಗಿ ಹತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ನಾನು ನಾಯಿಯಂತೆ ದಣಿದಿದ್ದೇನೆ. ಜೀವನ ನಿರ್ವಹಣೆಗಾಗಿ ತುಂಬಾ ಕಷ್ಟಪಡುತ್ತಿದ್ದೇನೆ. ಓದುವುದನ್ನು ನಿಲ್ಲಿಸಬೇಡಿ ಎಂದು ನನ್ನ ಶಿಕ್ಷಕರು ಸಾಕಷ್ಟು ಬಾರಿ ಎಚ್ಚರಿಸಿದರು. ಆದರೆ, ನಾನು ಅವರ ಮಾತುಗಳನ್ನು ಧಿಕ್ಕರಿಸಿ ಅರ್ಧದಲ್ಲೇ ಶಾಲೆ ಬಿಟ್ಟೆ. ಈಗ ನನ್ನ ಶಿಕ್ಷಕರ ಸಲಹೆಯ ಮೌಲ್ಯ ನನಗೆ ಅರಿವಾಗುತ್ತಿದೆ ಎಂದು ಆ ಯುವಕ ಕಣ್ಣೀರು ಹಾಕುತ್ತಾ ಹೇಳಿದ್ದಾನೆ.
ನಾನು ಜೀವನದಲ್ಲಿ ಒಂದು ಕ್ಷಣವೂ ಸುಮ್ಮನೇ ಕೂರಲು ಅಥವಾ ಹಿಂಜರಿಯಲು ಸಾಧ್ಯವಿಲ್ಲ, ನಾನೇನಾದರೂ ಸುಮ್ಮನೇ ಕುಳಿತರೆ ಜೀವನವು ಖಾಲಿ ಹೊಟ್ಟೆಯಲ್ಲಿ ನನ್ನನ್ನು ಶಿಕ್ಷಿಸುತ್ತದೆ. ಹೀಗಿರುವಾಗ ನಾನು ಭಯಪಡದಿರಲು ಹೇಗೆ ಸಾಧ್ಯ? ಎಂದು ಯುವಕ ಕಣ್ಣೀರಿಟ್ಟಿದ್ದಾನೆ.
ಕೆಲಸದ ಒತ್ತಡದಿಂದಾಗಿ ತನ್ನ ಹೆತ್ತವರನ್ನು ಪೋಷಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಜೀವನದ ಗುರಿಗಳನ್ನು ಸಾಧಿಸಲಾಗದೇ ವಿಷಾದದಿಂದಾಗಿಯೇ ನನ್ನ ಜೀವನ ಕುಸಿಯುತ್ತಿದೆ. ನನ್ನ ಹೆತ್ತವರಿಗೆ ಅವರು ಅರ್ಹವಾದ ಜೀವನವನ್ನು ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನು ಬಯಸಿದ ಜೀವನವನ್ನು ನಡೆಸಲು ಸಹ ನನಗೆ ಸಾಧ್ಯವಾಗುತ್ತಿಲ್ಲ. ಆ ಒಂದು ಸತ್ಯವು ನನ್ನ ಹೃದಯವನ್ನು ಮುರಿಯುತ್ತಿದೆ. ಇದರ ಬಗ್ಗೆ ನಾನು ಯಾರೊಂದಿಗೆ ಮಾತನಾಡಬೇಕು ಎಂದು ಯುವಕ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾನೆ.
ಯುವಕನ ವಿಡಿಯೋ ವೈರಲ್ ಆದ ನಂತರ, ಅನೇಕ ಜನರು ಆತನಿಗೆ ಬೆಂಬಲ ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ. ಅಳಬೇಡ ಸಹೋದರ ಇತ್ತೀಚಿನ ದಿನಗಳಲ್ಲಿ ಪದವಿ ಪಡೆದವರು ಕೂಡ ತುಂಬಾ ಕಷ್ಟಪಡುತ್ತಿದ್ದಾರೆ. ನೀವು ಚಿಂತಿಸಬೇಡಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರ್, ನಾನು ಚೆನ್ನಾಗಿಯೇ ಓದಿಕೊಂಡಿದ್ದೇನೆ. ಆದರೆ, ನನ್ನ ಪರಿಸ್ಥಿತಿ ಕೂಡ ನಿಮ್ಮಂತೆಯೇ ಇದೆ ಎಂದು ಇನ್ನೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ, ಕಳೆದ ವರ್ಷ, ಚೀನಾದ ಹ್ಯಾಂಗ್ಝೌನಲ್ಲಿ 55 ವರ್ಷದ ವ್ಯಕ್ತಿಯೊಬ್ಬರು 18 ಗಂಟೆಗಳ ಕೆಲಸದ ನಂತರ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ನಿದ್ರಿಸುವಾಗಲೇ ಸಾವಿಗೀಡಾಗಿದ್ದರು. ಆ ವೇಳೆ ಈ ಘಟನೆ ಭಾರಿ ಚರ್ಚೆಯಾಗಿತ್ತು. (ಏಜೆನ್ಸೀಸ್)