ಆಪರೇಷನ್ ಸಿಂಧೂರ ವೇಳೆ ಅನಾಥರಾಗಿದ್ದ 22 ಮಕ್ಕಳನ್ನು ದತ್ತು ತೆಗೆದುಕೊಂಡ ರಾಹುಲ್| Rahul Gandhi

Rahul Gandhi
Published on

Rahul Gandhi: ಆಪರೇಷನ್ ಸಿಂಧೂರ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್​ನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ 22 ಮಕ್ಕಳನ್ನು ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ದತ್ತು ಪಡೆಯಲಿದ್ದಾರೆ.

ಮೇ 24ರಂದು ಪೂಂಚ್​ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಈ ವೇಳೆ ಅನಾಥ ಮಕ್ಕಳನ್ನು ಗುರುತಿಸಲು ಮತ್ತು ಅವರ ಶಿಕ್ಷಣದ ವೆಚ್ಚವನ್ನು ಭರಿಸುವಂತೆ ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ವಕ್ತಾರ ರವೀಂದ್ರ ಶರ್ಮಾ, "ಆಪರೇಷನ್ ಸಿಂದೂರ್ ಸಮಯದಲ್ಲಿ ಪೂಂಚ್​ನಲ್ಲಿ ಪಾಕಿಸ್ತಾನ್ ಶೆಲ್​ ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ 22 ಮಕ್ಕಳನ್ನು ರಾಹುಲ್ ಗಾಂಧಿಯವರು ದತ್ತು ಪಡೆಯಲಿದ್ದಾರೆ. ಅವರ ಒಟ್ಟು ಶಿಕ್ಷಣದ ವೆಚ್ಚವನ್ನು ಭರಿಸಲಿದ್ದಾರೆ" ಎಂದು ಹೇಳಿದ್ದಾರೆ.

"ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಪೂಂಚ್‌ಗೆ ಹೋಗಿ 22 ಮಕ್ಕಳನ್ನು ಗುರುತಿಸಿದ್ದಾರೆ. ಪಾಕ್​ ಶೆಲ್ ದಾಳಿಯಲ್ಲಿ ತಮ್ಮ ಪೋಷಕರಲ್ಲಿ ಒಬ್ಬರನ್ನು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡವರನ್ನು ಪಟ್ಟಿ ಮಾಡಲಾಗಿದೆ. ಮಕ್ಕಳಿಗೆ ಮತ್ತು ಮನೆಗೆ ಆಧಾರವಾಗಿದ್ದವರನ್ನೇ ಕಳೆದುಕೊಂಡಿದ್ದಾರೆ. ಅಂಥವರನ್ನು ಗುರುತಿಸಿದ್ದೇವೆ" ಎಂದು ತಿಳಿಸಿದ್ದಾರೆ.

"ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಸ್ತ, ಯೂತ್ ಕಾಂಗ್ರೆಸ್ ಅಧ್ಯಕ್ಷರು ನಾಳೆ(ಬುಧವಾರ) ಪೂಂಚ್​ಗೆ ಭೇಟಿ ನೀಡಲಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಮೊದಲ ಕಂತಿನ ಸಹಾಯವನ್ನು ನೀಡಲಿದ್ದಾರೆ" ಎಂದು ಶರ್ಮಾ ಹೇಳಿದ್ದಾರೆ.

ಏಪ್ರಿಲ್ 22ರಂದು ಪಾಕ್ ಮೂಲದ ಉಗ್ರರು ಪಹಲ್ಗಾಮ್​ನಲ್ಲಿ ದಾಳಿ ಮಾಡಿ 26 ಪ್ರವಾಸಿಗರನ್ನು ಕೊಂದಿದ್ದರು. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕ್ ಉಗ್ರರ ಕ್ಯಾಂಪ್​ ಗುರಿಯಾಗಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಮೇ 7ರಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತ ಮತ್ತು ಪಾಕ್​ ನಡುವೆ 4 ದಿನಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಗಡಿ ಜಿಲ್ಲೆ ಪೂಂಚ್​ ಪಾಕ್​ನ ಶೆಲ್​ ದಾಳಿಗೆ ಹೆಚ್ಚು ಹಾನಿಗೊಳಗಾಯಿತು. ಕನಿಷ್ಠ 13 ಜನ ಮೃತಪಟ್ಟು, 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನೂರಾರು ಮನೆಗಳು ಹಾನಿಗೊಳಗಾಗಿದ್ದವು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net