ನವದೆಹಲಿ: ಕಳೆದ ವಾರ ಬಾಂಗ್ಲಾದೇಶದ ಢಾಕಾದಲ್ಲಿ ಭುಗಿಲೆದ್ದ ಸರ್ಕಾರಿ ಉದ್ಯೋಗ ಮೀಸಲಾತಿ ವಿವಾದ ಸದ್ಯ ಶಾಂತ ಸ್ವರೂಪ ಪಡೆಯುತ್ತಿದ್ದು, ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಪಟ್ಟುಹಿಡಿದು ಕೈಗೊಂಡಿದ್ದ ಪ್ರತಿಭಟನೆಯು ಹಿಂಚಾಚಾರಕ್ಕೆ ತಿರುಗಿದ ಪರಿಣಾಮ ಘಟನೆಯಲ್ಲಿ 440ಕ್ಕೂ ಅಧಿಕ ಜನರು ದುರಂತವಾಗಿ ಸಾವನ್ನಪ್ಪಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಾಂಗ್ಲಾ ತೊರೆದ ಪ್ರಧಾನಿ ಶೇಖ್ ಹಸೀನಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ದೇಶದಿಂದ ಪಲಾಯನ ಮಾಡಿದರು. ಸದ್ಯದ ಮಟ್ಟಿಗೆ ಭಾರತದಲ್ಲಿ ಆಶ್ರಯ ಪಡೆದಿರುವ ಅವರು, ತಮ್ಮ ಪುತ್ರ ಸಜೀಬ್ ವಾಝೆದ್ ಜಾಯ್ ಜತೆಗೂಡಿ ಚುನಾವಣೆಯ ಮೂಲಕ ಬಾಂಗ್ಲಾಗೆ ಹಿಂತಿರುಗಲು ದೊಡ್ಡ ಸಂಚನ್ನೇ ಹೂಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದನ್ನೂ ಓದಿ: ಸಂಪಾದಕೀಯ: ಮೇಲ್ಮನೆಯ ಘನತೆ ಕಾಪಾಡಿ
ಇನ್ನು ತಮ್ಮ ತಾಯಿ ಬಗ್ಗೆ ಮಾತನಾಡಿರುವ ಸಜೀಬ್, “ಈಗ ನಮ್ಮ ತಾಯಿ ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಬಾಂಗ್ಲಾಗೆ ಹೋಗುವುದು ಸತ್ಯ. ಆದ್ರೆ, ಮಧ್ಯಂತರ ಸರ್ಕಾರ ಏನಾದರೂ ಚುನಾವಣೆ ಘೋಷಣೆ ಮಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ನಾವು ರಾಜಕೀಯ ತೊರೆಯುವ ಮಾತಿಲ್ಲ. ಮಧ್ಯಂತರ ಸರ್ಕಾರ ಏನಾದರೂ ಚುನಾವಣೆ ಘೋಷಿಸಿದರೆ, ಆಗ ನಮ್ಮ ಅವಾಮಿ ಲೀಗ್ ಪಾರ್ಟಿ ಅಲ್ಲಿ ನಡೆಯುವ ಚುನಾವಣೆಯಲ್ಲಿ ಭಾಗವಹಿಸುತ್ತದೆ. ನಾವು ಸುಲಭವಾಗಿ ಗೆಲ್ಲಬಹುದು ಎಂಬ ಖಾತ್ರಿ ನನಗಿದೆ” ಎಂದರು.
“ನನ್ನ ಅಮ್ಮ ಅಲ್ಲಿನ ಪರಿಸ್ಥಿತಿಗೆ ಹೆದರಿ ಬಾಂಗ್ಲಾ ತೊರೆಯಲಿಲ್ಲ. ಹಸೀನಾ ಅವರ ಭದ್ರತಾ ಪಡೆಗಳು ಭಾರೀ ಶಸ್ತ್ರಸಜ್ಜಿತವಾಗಿತ್ತು. ಪ್ರಧಾನಿ ನಿವಾಸದ ಕಾವಲು ಕಾಯಲು, ಉಳಿಸಿಕೊಳ್ಳಲು ಅವರು ಸಿದ್ಧರಿದ್ದರು. ಆದರೆ ಪ್ರತಿಭಟನಾಕಾರರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸಿದ್ದರು. ತಾಯಿ ಅವರು ಅಲ್ಲೇ ಇದ್ದಿದ್ದರೆ ಖಂಡಿತ ಅದೊಂದು ಸ್ಮಶಾನ ಆಗುತ್ತಿತ್ತು. ಬಲಿಷ್ಠ ಭದ್ರತಾ ಪಡೆ ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಆಗ ಅದು ಹತ್ಯಾಕಾಂಡವಾಗುತ್ತಿತ್ತು. ಇದನ್ನು ಅರಿತ ನನ್ನಮ್ಮ , ವಿದ್ಯಾರ್ಥಿನಿಯರ ಪ್ರಾಣ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೆ ಅಲ್ಲಿಂದ ಪಲಾಯನ ಮಾಡಿದರು” ಎಂದು ಸಜೀಬ್ ಹೇಳಿದರು.
ಇದನ್ನೂ ಓದಿ: ಟೀಮ್ ಇಂಡಿಯಾ ಪಾಕ್ನ ಮಣಿಸಲು ಸಾಧ್ಯವೇ ಇಲ್ಲ! ಆದ್ರೆ… ಮಾಜಿ ಆಟಗಾರ
“ಈ ಕೃತ್ಯ ಸಣ್ಣ ಗುಂಪಿನಿಂದ ಮಾಡಲಾಗಿದೆ ಮತ್ತು ಇದರಲ್ಲಿ ವಿದೇಶಿ ಗುಪ್ತಚರ ಸಂಸ್ಥೆಯ ಕೈವಾಡವಿರುವುದು ನನಗೆ ಗೊತ್ತಿದೆ. ಇದು ಐಎಸ್ಐನ ಕೃತ್ಯ. ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನುಸ್ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮಾಹಿತಿ ಪಡೆದೆ. ಅಲ್ಲಿನ ಮಧ್ಯಂತರ ಸರ್ಕಾರ ಅಸಂವಿಧಾನಿಕ” ಎಂದು ಪ್ರಸ್ತುತ ಬಾಂಗ್ಲಾದೇಶದ ಬೆಳವಣಿಗೆ ಕುರಿತು ಶೇಖ್ ಹಸೀನಾ ಪುತ್ರ ಸಜೀಬ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.