

ಭಾರತದ ಸಂಸದೀಯ ಪರಂಪರೆಯಲ್ಲಿ ರಾಜ್ಯಸಭೆಗೆ ಲೋಕಸಭೆಗಿಂತಲೂ ಉನ್ನತ ಸ್ಥಾನಮಾನ ಇದೆ. ಏಕೆಂದರೆ ಅದು ಹಿರಿಯರ ಮನೆ. ಮೇಲ್ಮನೆ. ಚಿಂತಕರು, ವಿಚಾರವಂತರು ತಮ್ಮ ಅನುಭವ ಮತ್ತು ವಿಚಾರಗಳ ಮೂಲಕ ಸಂಸದೀಯ ಪರಂಪರೆಯನ್ನು ಹೆಚ್ಚು ಸಶಕ್ತಗೊಳಿಸುತ್ತ ಬಂದ ಪ್ರೇರಣಾದಾಯಿ ಇತಿಹಾಸ ಈ ಸದನಕ್ಕೆ ಇದೆ. ಹಿಂದೆಲ್ಲ ಮೇಲ್ಮನೆಯ ಚರ್ಚೆಗಳನ್ನು ಇಡೀ ದೇಶ ಗಂಭೀರವಾಗಿ ಆಲಿಸುತ್ತಿತ್ತು. ಮುಖ್ಯವಾಗಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಪ್ರಮುಖ ವಿಷಯಗಳು ಚರ್ಚೆಯಾಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆ ಘನತೆ-ಗೌರವಕ್ಕೆ ಚ್ಯುತಿ ತರುವಂತಿವೆ.
ವಿರೋಧ ಪಕ್ಷಗಳ ಸದಸ್ಯರು ಸಭಾಪತಿಗೇ ಅಗೌರವ ತೋರುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಇದು ಖಂಡಿತವಾಗಿಯೂ ಸಂಸದೀಯ ಮೌಲ್ಯಗಳಿಗೆ ವಿರುದ್ಧವಾದದ್ದು. ಸಣ್ಣಸಣ್ಣ ವಿಷಯಗಳನ್ನು ಪ್ರತಿಪಕ್ಷಗಳು ಅತಿರೇಕಕ್ಕೆ ಕೊಂಡೊಯ್ಯುತ್ತಿದ್ದು, ಸಭಾತ್ಯಾಗವನ್ನು ರೂಢಿಯಾಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ತೃಣಮೂಲ ಕಾಂಗ್ರೆಸ್ನ ಡೆರೆಕ್ ಓಬ್ರಿಯಾನ್, ಕಾಂಗ್ರೆಸ್ನ ಜೈರಾಮ್ ರಮೇಶ್ ಮುಂತಾದವರ ವರ್ತನೆಯಿಂದ ಬೇಸತ್ತು ಸಭಾಪತಿ ಜಗದೀಪ್ ಧನಕರ್ ಅವರೇ ಗುರುವಾರ ಸಭೆಯಿಂದ ಹೊರ ನಡೆದ ಅತ್ಯಂತ ಅಪರೂಪದ ಪ್ರಸಂಗ ನಡೆದಿದೆ. ಈ ಘಟನೆಯ ನಂತರವಾದರೂ ಪ್ರತಿಪಕ್ಷಗಳು ತಮ್ಮ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಮರುದಿನವೇ (ಶುಕ್ರವಾರ) ಸಭಾಪತಿ ಧನಕರ್ ಜತೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ವಾಗ್ವಾದಕ್ಕೆ ಇಳಿದಿದ್ದಲ್ಲದೆ, ಸಭಾಪತಿ ಸ್ಥಾನಕ್ಕೆ ಅಗೌರವ ತೋರಿದ್ದಾರೆ.
ಜಯಾ ಬಚ್ಚನ್ ಮತ್ತು ಧನಕರ್ ಅವರ ಮಧ್ಯೆ ವಾಗ್ವಾದ ನಡೆದಿರುವುದು ಕಳೆದ 10 ದಿನಗಳಲ್ಲಿ ಇದು ಮೂರನೇ ಬಾರಿ. ಅದೂ ಅವರ ಹೆಸರನ್ನು ಪತಿಯ ಹೆಸರು ಸೇರಿಸಿ ಕರೆಯುತ್ತಾರೆ ಎಂಬ ಸಣ್ಣ ಕಾರಣಕ್ಕಾಗಿ! ಭಾರತೀಯ ಪರಂಪರೆಯಲ್ಲಿ ಮಹಿಳೆಯರನ್ನು ಅವರ ಪತಿಯ ಹೆಸರು ಸೇರಿಸಿ ಕರೆಯುವುದು ವಾಡಿಕೆ. ಮಾತ್ರವಲ್ಲ, ಚುನಾವಣಾಧಿಕಾರಿ ಪ್ರಮಾಣಪತ್ರದಲ್ಲಿ ಹಾಗೂ ಲೋಕಸಭೆ, ರಾಜ್ಯಸಭೆ ಅಧಿಕಾರಿಗಳು ಕಡತದಲ್ಲಿ ನಮೂದಿಸಿರುವ ಹೆಸರಿನಿಂದಲೇ ಎರಡೂ ಸದನದ ಸದಸ್ಯರನ್ನು ಕರೆಯಲಾಗುತ್ತದೆ. ಈ ಸಾಮಾನ್ಯ ಶಿಷ್ಟಾಚಾರ ಜಯಾ ಮತ್ತು ಪ್ರತಿಪಕ್ಷದ ಸದಸ್ಯರಿಗೆ ಗೊತ್ತಿಲ್ಲವೆ? ಇಷ್ಟಕ್ಕೇ ಶುಕ್ರವಾರ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿರುವುದು ಆಶ್ಚರ್ಯಕರವಷ್ಟೇ ಅಲ್ಲ, ಈ ರೀತಿಯ ವರ್ತನೆ ಹಿಂದೆ ಯಾವುದೋ ಗೌಪ್ಯ ಉದ್ದೇಶ ಇರುವ ಗುಮಾನಿಯನ್ನೂ ಮೂಡಿಸುತ್ತದೆ. ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಇಂತಹ ವರ್ತನೆಯನ್ನು ನಿಲ್ಲಿಸಬೇಕು. ಸಭಾಪತಿ ಸ್ಥಾನಕ್ಕೆ ಸೂಕ್ತ ಗೌರವ ನೀಡಬೇಕು. ಸಂಸದೀಯ ಮೌಲ್ಯ, ಶಿಷ್ಟಾಚಾರಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು.