ಮೀರತ್: ನನಗೆ ಓದಲು ಸಾಧ್ಯವಾಗುತ್ತಿಲ್ಲ, ನಾನು ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂದು ವಿಡಿಯೋ ಮಾಡಿ MBBS ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ.
ಮೃತರನ್ನು ಮೀರತ್ನ ಗಂಗಾನಗರದ ನಿವಾಸಿ ರೋಹನ್ ಕುಮಾರ್ (26) ಎಂದು ಗುರುತಿಸಲಾಗಿದ್ದು, ಇವರು ಬಂದಾದಲ್ಲಿರುವ ರಾಣಿ ದುರ್ಗಾವತಿ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷ MBBS ವ್ಯಾಸಂಗ ಮಾಡುತ್ತಿದ್ದರು. ವಿಡಿಯೋದಲ್ಲಿ ಇವರ ಪತ್ನಿ ಅಕ್ಷರಾ ಅವರ ಹೆಸರನ್ನು ಉಲ್ಲೇಖಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಅಪ್ಪ-ಅಮ್ಮ ನಾನು ನಿಮ್ಮಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಒತ್ತಡದಲ್ಲಿದ್ದೇನೆ. ಅದು ಅದರ ಮಿತಿಯನ್ನು ತಲುಪಿದೆ. ನನಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ತುಂಬಾ ಸಾಲ ಮಾಡಿಕೊಂಡಿದ್ದು, ಈ ಬಅರಿ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ. ನನ್ನ ಒತ್ತಡಕ್ಕೆ ಮೂಲ ಕಾರಣ ಅಕ್ಷರಾ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದ ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್, ರೋಹನ್ ಕುಮಾರ್ ಹಾಗೂ ಪತ್ನಿ ಅಕ್ಷರಾ ಬಂದಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದು, ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದರು. ರೋಹನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಕಂಡು ಪತ್ನಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ನೇಹಿತನ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ರೋಹನ್ ಆ ವೇಳೆಗಾಗಲೇ ಮೃತಪಟ್ಟಿದ್ದಾರೆ.
ಒತ್ತಡದ ಕಾರಣಕ್ಕೆ ರೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಕುಟುಂಬಸ್ಥರು ಅಕ್ಷರಾ ಹಾಗೂ ಆಕೆಯ ಸ್ನೇಹಿತನೆ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ಅಕ್ಷರಾ, ಆಕೆಯ ಸ್ನೇಹಿತ ಹಾಗೂ ಕುಟುಂಬಸ್ಥರಿಗೆ ವಿಚಾರಣೆ ಮುಗಿಯುವವರೆಗೂ ಊರು ತೊರೆಯದಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.