

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಮ್ಮಿಕೊಂಡ ಮಹತ್ವದ ಯೋಜನೆ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ನಿಂದ ಭರ್ಜರಿ ಯಶಸ್ಸು ಗಳಿಸಿದೆ. ಇದೇ ಕಾರಣಕ್ಕೆ ಇಸ್ರೋ ಮಾತ್ರವಲ್ಲದೆ ಅಲ್ಲಿನ ವಿಜ್ಞಾನಿಗಳ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬುಧವಾರ ಸಂಜೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವುದನ್ನು ಇಸ್ರೋ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ನೇರಪ್ರಸಾರ ಮಾಡಿತ್ತು. ಈ ಸಂದರ್ಭದಲ್ಲಿ ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೈವ್ನಲ್ಲಿ ಹಾಜರಾಗಿ ಯಶಸ್ಸಿಗೆ ಸಾಕ್ಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇಂದು ವಿದೇಶದಿಂದ ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲ, ಈ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಭೇಟಿಯಾಗಿ ಶ್ಲಾಘಿಸಿದ್ದಾರೆ.
ಅದರಲ್ಲೂ ಈ ಯಶಸ್ಸಿನಲ್ಲಿ ಇಸ್ರೋದ ಮಹಿಳಾ ವಿಜ್ಞಾನಿಗಳ ದೊಡ್ಡ ಬಳಗವೇ ಇದ್ದು, ಅವರನ್ನು ಪ್ರಧಾನಿ ಮೋದಿ ಪ್ರತ್ಯೇಕವಾಗಿ ಭೇಟಿಯಾಗಿ ಮೆಚ್ಚುಗೆ ಸೂಚಿಸಿದ್ದಾರೆ. 'ನಾನು ಚಂದ್ರಯಾನ-3ರಲ್ಲಿ ಪಾಲ್ಗೊಂಡ ಇಸ್ರೋದ ಮಹಿಳಾ ವಿಜ್ಞಾನಿಗಳನ್ನು ಭೇಟಿಯಾಗಿದ್ದು, ಭಾರತೀಯ ವಿಜ್ಞಾನಕ್ಕೆ ಅವರು ನೀಡಿದ್ದ ಕೊಡುಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ ಮತ್ತು ನಾರಿಶಕ್ತಿ ನಮಿಸಿದೆ' ಎಂಬುದಾಗಿ ಮೋದಿ ಹೇಳಿಕೊಂಡಿದ್ದಾರೆ.