

ನವದೆಹಲಿ: ಫುಡ್ ಆರ್ಡರ್ ಮತ್ತು ಅದನ್ನು ಡಿಲಿವರಿ ಮಾಡುವ ಮುಂಚೂಣಿ ಕಂಪನಿಗಳಲ್ಲಿ ಸ್ವಿಗ್ಗಿ ಕೂಡ ಒಂದು. ನಿನ್ನೆ ವಿಶ್ವ ಇಡ್ಲಿ ದಿನದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿ ತನ್ನ ಅಂಕಿ-ಅಂಶಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಇಡ್ಲಿಗಿರುವ ಬೇಡಿಕೆಯನ್ನು ನೋಡಿದರೆ ಎಲ್ಲರ ಹುಬ್ಬೇರುವುದು ಗ್ಯಾರೆಂಟಿ.
ವರದಿಯ ಪ್ರಕಾರ ಕಳೆದ ವರ್ಷದಲ್ಲಿ ಭಾರತದಲ್ಲಿ ಬರೋಬ್ಬರಿ 33 ಮಿಲಿಯನ್ ಪ್ಲೇಟ್ಸ್ ಇಡ್ಲಿಯನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾಗಿದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಇಡ್ಲಿ ಪ್ರಿಯನೊಬ್ಬ ಕಳೆದ 12 ತಿಂಗಳಲ್ಲಿ ಇಡ್ಲಿಗಾಗಿಯೇ ಬರೋಬ್ಬರಿ 6 ಲಕ್ಷ ರೂ. ಖರ್ಚು ಮಾಡಿದ್ದಾರೆ. ನಂಬಲು ಅಸಾಧ್ಯವಾದರೂ ಇದು ಸತ್ಯ ಸಂಗತಿಯಾಗಿದೆ.
ಸ್ವಿಗ್ಗಿ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ ಒಂದು ವರ್ಷದಲ್ಲಿ 33 ಮಿಲಿಯನ್ ಪ್ಲೇಟ್ ಇಡ್ಲಿ ಮಾರಾಟವಾಗಿರುವುದರಿಂದ ಇಡ್ಲಿಯನ್ನು ಪ್ರಖ್ಯಾತ ಖಾದ್ಯ ಎಂದು ಪರಿಗಣಿಸಲಾಗಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಅತಿ ಹೆಚ್ಚು ಇಡ್ಲಿ ಆರ್ಡರ್ ಮಾಡಿದ ಅಗ್ರ ಮೂರು ನಗರಗಳಾಗಿವೆ. ಮುಂಬೈ, ಕೊಯಮತ್ತೂರು, ಪುಣೆ, ವೈಜಾಗ್, ದೆಹಲಿ, ಕೊಲ್ಕತ್ತ ಮತ್ತು ಕೊಚ್ಚಿ ನಂತರ ಸ್ಥಾನಗಳಲ್ಲಿವೆ.
ಇಡ್ಲಿಯ ಪ್ರಖ್ಯಾತಿ ಎಷ್ಟರಮಟ್ಟಿಗೆ ಇದೆ ಅಂದರೆ, ಹೈದರಾಬಾದ್ ಮೂಲದ ಇಡ್ಲಿ ಪ್ರಿಯ ಅದರ ಪ್ರಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹೈದರಾಬಾದ್ ಮೂಲದ ವ್ಯಕ್ತಿ ಅತಿ ಹೆಚ್ಚು ಆರ್ಡರ್ ಮಾಡಿದ್ದು, ಕೇವಲ 1 ವರ್ಷದಲ್ಲಿ ಇಡ್ಲಿಗಾಗಿ ಬರೋಬ್ಬರಿ 6 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದಾರೆ. ತಾನು ಪ್ರಯಾಣಿಸಿದ ವಿವಿಧ ಸ್ಥಳಗಳಲ್ಲೂ ಇಡ್ಲಿಯನ್ನು ಆರ್ಡರ್ ಮಾಡಿದ್ದು, ಒಟ್ಟು 8,428 ಇಡ್ಲಿ ಪ್ಲೇಟ್ಗಳನ್ನು ಒಂದು ವರ್ಷದಲ್ಲಿ ಆರ್ಡರ್ ಮಾಡಿದ್ದಾರೆ. ಬೆಂಗಳೂರು ಮತ್ತು ಚೆನ್ನೈಗೆ ಪ್ರಯಾಣಿಸುವಾಗ ಇಡ್ಲಿಯನ್ನು ಆರ್ಡರ್ ಮಾಡಿದ್ದು, ಸ್ನೇಹಿತರು ಮತ್ತು ಕುಟುಂಬದವರಿಗೂ ತರಿಸಿಕೊಟ್ಟಿದ್ದಾರೆ.
ಆರ್ಡರ್ ಮಾಡುವುದರ ಹೊರತಾಗಿ, ಜನರು ಹೆಚ್ಚು ಇಡ್ಲಿಯನ್ನು ಆರ್ಡರ್ ಮಾಡಿ ಸಮಯ. ಇಡ್ಲಿಯ ನೆಚ್ಚಿನ ಬಗೆಗಳು ಮತ್ತು ಮುಂತಾದವುಗಳನ್ನು ಸಹ Swggiy ವಿಶ್ಲೇಷಿಸಿದೆ. ವರದಿಯ ಪ್ರಕಾರ ಅತಿ ಹೆಚ್ಚು ಇಡ್ಲಿಯನ್ನು ಆರ್ಡರ್ ಮಾಡಿದ ಅಗ್ರ ಐದು ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹೈದರಾಬಾದ್, ಮೂರನೇ ಸ್ಥಾನದಲ್ಲಿ ಚೆನ್ನೈ, ನಾಲ್ಕು ಮುಂಬೈ ಮತ್ತು ಐದನೇ ಸ್ಥಾನದಲ್ಲಿ ಕೊಯಮತ್ತೂರು ಇದೆ.
ಇಡ್ಲಿಯನ್ನು ಆರ್ಡರ್ ಮಾಡುವ ಅತ್ಯಂತ ಜನಪ್ರಿಯ ಸಮಯ ಯಾವುದೆಂದರೆ ಬೆಳಿಗ್ಗೆ 8 ರಿಂದ 10 ರವರೆಗೆ ಮತ್ತು ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು ಮತ್ತು ಮುಂಬೈನ ಜನರು ರಾತ್ರಿಯ ಊಟಕ್ಕೂ ತಮ್ಮ ತಟ್ಟೆಯಲ್ಲಿ ಇಡ್ಲಿಯನ್ನು ಇಷ್ಟಪಡುತ್ತಾರೆ. ಬೆಂಗಳೂರಿಗರಿಗೆ ರವೆ ಇಡ್ಲಿ, ಚೆನ್ನೈ ಮಂದಿಗೆ ಘೀ ಪೋಡಿ ಇಡ್ಲಿ, ಹೈದರಾಬಾದ್ ಮಂದಿಗೆ ಕರಂಪೋಡಿ ಘೀ ಇಡ್ಲಿ ಮತ್ತು ಮುಂಬೈ ಮಂದಿಗೆ ಇಡ್ಲಿ ವಡಾ ನೆಚ್ಚಿನ ಇಡ್ಲಿ ಬಗೆಗಳಾಗಿವೆ.
ಆದಾಗ್ಯೂ ಇಡ್ಲಿ ಇಷ್ಟೊಂದು ಆರ್ಡರ್ಗಳು ಮತ್ತು ಎಲ್ಲರ ಪ್ರೀತಿಯನ್ನು ಗಳಿಸಿದರೂ ಇಡ್ಲಿ ಮಾತ್ರ ಸ್ವಿಗ್ಗಿಯಲ್ಲಿ ಅಗ್ರ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ, ಸ್ವಿಗ್ಗಿಯ ಅಂಕಿ-ಅಂಶಗಳ ಪ್ರಕಾರ, ಮಸಾಲಾ ದೋಸೆಯ ನಂತರ ಇಡ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರವಾಗಿದೆ. (ಏಜೆನ್ಸೀಸ್)