ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ಸೆರೆ; 35.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Nepali gang arrested
Published on

ಬೆಂಗಳೂರು: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ನೇಪಾಳಿ ಗ್ಯಾಂಗ್‌ನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಮೋಹನ್ ಬಿಸ್ವಕರ್ಮ ಅಲಿಯಾಸ್ ಮೋಹನ್ ಸಿಂಗ್, ಜನಕ್ ಜೈಶಿ ಅಲಿಯಾಸ್ ಜನಕ್ ಜೋಶಿ, ಬಿಬೇಕ್ ರಾಜ್ ದೇವಕೂಟ, ಸೀತರಾಮ್ ಜೈಸಿ ಮತ್ತು ಕಮಲ ಬಿಕೆ ಅಲಿಯಾಸ್ ಕಮಲ ಸಿಂಗ್ ಬಂಧಿತರು. ಆರೋಪಿಗಳಿಂದ ಚಿನ್ನ, ಬೆಳ್ಳಿ, ಬೈಕ್ ಸೇರಿದಂತೆ 35.80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾ.3ರಂದು ಎಎಂಎಸ್ ಬಡಾವಣೆ ನಿವಾಸಿ ನಂದನ್ ಕುಮಾರ್ ಮನೆ ಬೀಗ ಮುರಿದು 989.58 ಗ್ರಾಂ ಚಿನ್ನಾಭರಣ, 6.5 ಕೆಜಿ ಬೆಳ್ಳಿ ವಸ್ತುಗಳನ್ನು ಕಿಡಿಗೇಡಿಗಳು ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ, ಮೊಬೈಲ್ ಕರೆಗಳು ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿ ತಾಂತ್ರಿಕ ಮಾಹಿತಿ ಆಧರಿಸಿ ನೇಪಾಳಿ ಗ್ಯಾಂಗ್ ಅನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೃತ್ತಿಪರ ಕಳ್ಳರಾದ ಆರೋಪಿಗಳು ಮಹಾರಾಷ್ಟ್ರ ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. 2017ರಿಂದ ಹಲವು ಬಾರಿ ಮನೆಗಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರ ಬಂದು ಆರೋಪಿಗಳು ದುಷ್ಕೃತ್ಯ ಮುಂದುವರಿಸಿದ್ದರು.

ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶಕ್ಕೆ ನೇಪಾಳಿ ಗ್ಯಾಂಗ್, ಕಳ್ಳತನಕ್ಕೆ ಇಳಿದಿತ್ತು. ಭಾರತದ ಪ್ರಮುಖ ನಗರಗಳಿಗೆ ಬಂದು ಜನ ವಸತಿ ಪ್ರದೇಶದಲ್ಲಿ ಸಂಚಾರ ನಡೆಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ವಿದ್ಯಾರಣ್ಯಪುರದ ನಂದನ್ ಕುಮಾರ್ ಮನೆಗೆ ಕನ್ನ ಹಾಕಿದ್ದರು.

ಕೆಲಸದ ನಿಮಿತ್ತ ಕುಟುಂಬದ ಜತೆ ನಂದನ್ ದೊಡ್ಡಬಳ್ಳಾಪುರಕ್ಕೆ ತೆರಳಿದ್ದರು. ಈ ವೇಳೆ ಮನೆಗೆ ಬೀಗ ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಆರೋಪಿಗಳ ಬಂಧನದಿಂದ ಮುಂಬೈನ್ ಚಾರ್‌ಕೋಪ್, ಬೆಂಗಳೂರಿನ ಮಹದೇವಪುರ, ಆರ್.ಟಿ.ನಗರ, ಕೋರಮಂಗಲ, ಯಲಹಂಕ ಉಪ ನಗರ, ವಿದ್ಯಾರಣ್ಯಪುರ ಠಾಣೆಗಳಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net