

ಮುಂಬೈ: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರು. ಬಾಲಿವುಡ್ನಲ್ಲಿ 'ಸಿಂಗಂ' ಮತ್ತು 'ಸ್ಪೆಷಲ್ 26' ಚಿತ್ರಗಳಲ್ಲಿ ನಟಿಸಿದ ಕಾಜಲ್, ಆ ನಂತರ ಬಾಲಿವುಡ್ನಿಂದ ದೂರವಾಗಿ, ದಕ್ಷಿಣದ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸಿದರು. ಇಷ್ಟಕ್ಕೂ ಕಾಜಲ್, ಬಾಲಿವುಡ್ನಿಂದ ದೂರಾಗಿದ್ದೇಕೆ? ಅದಕ್ಕೆ ಅವರೇ ಈಗ ಉತ್ತರಿಸಿದ್ದಾರೆ.
ಈ ಕುರಿತು ಸಮಾರಂಭದಲ್ಲಿ ಮಾತನಾಡಿರುವ ಅವರು, 'ಬಹಳಷ್ಟು ನಟ-ನಟಿಯರಿಗೆ ಬಾಲಿವುಡ್ನಿಂದ ತಮ್ಮ ಚಿತ್ರಜೀವನ ಪ್ರಾರಂಭಿಸಬೇಕು ಎಂಬ ಆಸೆ ಇರುತ್ತದೆ. ಏಕೆಂದರೆ, ಹಿಂದಿ ಭಾಷೆಯ ಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗುತ್ತವೆ. ಆದರೆ, ಅದಕ್ಕೆ ಹೋಲಿಸಿದರೆ, ದಕ್ಷಿಣದ ಚಿತ್ರರಂಗ ಬಹಳ ಫ್ರೆಂಡ್ಲಿ. ಅಲ್ಲಿ ಕೆಲವು ಅದ್ಭುತ ತಂತ್ರಜ್ನರು, ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅದ್ಭುತವಾದ ಚಿತ್ರಗಳು ಬರುತ್ತಿವೆ. ಬರೀ ಒಂದು ಭಾಷೆಯಲ್ಲಷ್ಟೇ ಅಲ್ಲ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ನಾಲ್ಕೂ ಭಾಷೆಗಳಲ್ಲಿ ಬರುತ್ತಿವೆ' ಎಂದಿದ್ದಾರೆ.
'ಹಿಂದಿ ನನ್ನ ಮಾತೃಭಾಷೆ ಮತ್ತು ನಾನು ಹಿಂದಿ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಹಿಂದಿ ಚಿತ್ರರಂಗದಲ್ಲಿ ನನಗೆ ಬಹಳ ಒಳ್ಳೆಯ ಅವಕಾಗಳು ಸಿಕ್ಕಿವೆ. ಆದರೆ, ನನಗೆ ದಕ್ಷಿಣದ ಪರಿಸರ, ಅಲ್ಲಿನ ಮೌಲ್ಯಗಳು ಮತ್ತು ಶಿಸ್ತು ಬಹಳ ಇಷ್ಟ. ಅವೆಲ್ಲ ಬಾಲಿವುಡ್ನಲ್ಲಿ ಮಿಸ್ ಆಗುತ್ತಿದೆ ಎಂಬುದು ನನ್ನ ಅಭಿಪ್ರಾಯ' ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ತಾನು ಮುಂಬೈ ಹುಡುಗಿ ಆದರೂ, ಹೈದರಾಬಾದ್ ಮತ್ತು ಚೆನ್ನೈ ಮನೆ ಇದ್ದಂತೆ ಎಂದಿರುವ ಅವರು, 'ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿ. ಆದರೆ, ನನ್ನ ವೃತ್ತಿಜೀವನ ಶುರುವಾಗಿದ್ದು ತೆಲುಗಿನಲ್ಲಿ. ಹಿಂದಿಯಲ್ಲಿ ಎರಡು ಚಿತ್ರಗಳನ್ನು ಮಾಡಿದ್ದರೂ, ನಾನು ಹೆಚ್ಚು ಕೆಲಸ ಮಾಡಿದ್ದು ತಮಿಳು ಮತ್ತು ತೆಲುಗಿನಲ್ಲೇ. ಹಾಗಾಗಿ, ಚೆನ್ನೈ ಮತ್ತು ಹೈದರಾಬಾದ್ ನನ್ನ ಮನೆ ಇದ್ದಂತೆ' ಎಂದು ಹೇಳಿದ್ದಾರೆ.