ಪಟ್ನಾ: ಸಾಮಾನ್ಯವಾಗಿ ನಾವು ನೋಡಿರುವಂತೆ ಜನರು ಹಣ, ಒಡವೆ ಹಾಗೂ ಆಸ್ತಿಯನ್ನು ಹಂಚಿಕೊಂಡಿರುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಹಂಚಿಕೆಯಲ್ಲಿ ಉಂಟಾಗುವ ತಾರತಮ್ಯದಿಂದಾಗಿ ಹೊಡೆದಾಡಿಕೊಂಡು ಕೋರ್ಟ್, ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆಗಳನ್ನು ಸಹ ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಪತ್ನಿಯರಿಬ್ಬರು ತಮ್ಮ ಪತಿರಾಯನನ್ನು ಹಂಚಿಕೊಂಡಿದ್ದು, ಈ ವಿಚಾರ ಸದ್ಯ ವೈರಲ್ ಆಗುತ್ತಿದೆ.
ಬಿಹಾರದ ಪೂರ್ನಿಯಾ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಎಂದು ಗಂಡನನ್ನು ಪತ್ನಿಯರಿಬ್ಬರು ಹಂಚಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಎಲ್ಲರ ಗಮನ ಸೆಳೆಯುತ್ತಿದ್ದು, ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಿಹಾರದ ಪೂರ್ನಿಯಾ ಮೂಲದ ವ್ಯಕ್ತಿಯೊಬ್ಬರು ಏಳು ವರ್ಷಗಳ ಹಿಂದೆ ತನ್ನ ಮೊದಲ ಪತ್ನಿಗೆ ತಿಳಿಯದೆ ಎರಡನೇ ಮದುವೆ ಮಾಡಿಕೊಂಡಿದ್ದರು. ತಡವಾಗಿ ಈ ವಿಚಾರ ತಿಳಿದ ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿ ತನಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಶರ್ಮ ಪ್ರಕರಣವನ್ನು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ವರ್ಗಾಯಿಸಿರು.
ಪತಿ ಹಾಗೂ ಇಬ್ಬರು ಪತ್ನಿಯರ ವಿಚಾರಣೆ ನಡೆಸಿದ ಕುಟುಂಬ ಸಮಾಲೋಚನಾ ಕೇಂದ್ರದ ಅಧಿಕಾರಿಗಳು ಗಂಡನನ್ನು ಇಬ್ಬರು ಹೆಂಡತಿಯರ ನಡುವೆ ಹಂಚಿದರು. ಅಂದರೆ ವಾರದಲ್ಲಿ ಗಂಡ ಮೊದಲ ಹೆಂಡತಿಯ ಜೊತೆ ಮೂರು ದಿನ ಇದ್ರೆ ಇನ್ನು ಮೂರು ದಿನ ಎರಡನೇ ಹೆಂಡತಿಯ ಜೊತೆ ಇರಬೇಕು. ಮತ್ತು ಉಳಿದ ಒಂದು ದಿನ ಆತ ತನ್ನ ಇಚ್ಛೆಯಂತೆ ಎಲ್ಲಿ ಬೇಕಾದರೂ ಕಳೆಯಬಹುದು ಎಂದು ತೀರ್ಪು ನೀಡಿದರು.
ಇದಲ್ಲದೆ ಮಕ್ಕಳ ಶಿಕ್ಷಣ ಮತ್ತು ಆಹಾರಕ್ಕಾಗಿ ಪತಿಯು ತನ್ನ ಮೊದಲ ಪತ್ನಿಗೆ ಪ್ರತಿ ತಿಂಗಳು 4,000 ರೂ.ಗಳನ್ನು ನೀಡಬೇಕೆಂದು ತೀರ್ಪು ನೀಡಲಾಯಿತು. ಅಧಿಕಾರಿಗಳ ಈ ನಿರ್ಧಾರಕ್ಕೆ ವ್ಯಕ್ತಿ ಹಾಗೂ ತನ್ನಿಬ್ಬರು ಪತ್ನಿಯರು ಒಪ್ಪಿಕೊಂಡಿದ್ದು, ಕುಟುಂಬ ಸಮಾಲೋಚನಾ ಕೇಂದ್ರದ ಈ ವಿಶಿಷ್ಟ ನಿರ್ಧಾರವನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದಾರೆ.