ಭಾರಿ ಪ್ರಮಾಣದ ಗಾಂಜಾ ವಶ; ಎನ್​ಸಿಬಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಇದು ಈ ವರೆಗಿನ ದಾಖಲೆ!

Ganja F
Published on

ಬೆಂಗಳೂರು: ರಾಜಧಾನಿ ಬೆಂಗಳೂರು ವಲಯದ ಎನ್​ಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದು, ಇದು ಇವರ ಪಾಲಿಗೆ ಇದುವರೆಗಿನ ಗರಿಷ್ಠ ಪ್ರಮಾಣದ ಗಾಂಜಾ ವಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಎನ್​ಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಮೂಲದ ಕೆ. ಕಾಳೇ, ಡಿ. ದುರಾಲ್ಕರ್ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಮಾತ್ರವಲ್ಲ ಗಾಂಜಾ ಸಾಗಿಸುತ್ತಿದ್ದ ಟ್ರಕ್​ ಕೂಡ ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್​ನ ಪೆದ್ದ ಅಂಬರ್​ಪೇಟ್ ಟೋಲ್ ಪ್ಲಾಜಾ ಬಳಿ ಇವರು ಈ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿಗಳು ಹೈದರಾಬಾದ್​ನಿಂದ ಪುಣೆ, ಮುಂಬೈ ಸೇರಿ ಹಲವೆಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದರು.

ಆರೋಪಿಗಳು ಟ್ರಕ್​ನಲ್ಲಿ ಗಾಂಜಾ ಸಾಗಿಸುತ್ತಿದ್ದು, ಅದರಲ್ಲಿ 1080 ಗಾಂಜಾ ಪೊಟ್ಟಣಗಳಿದ್ದವು. ಒಂದೊಂದು ಪೊಟ್ಟಣದಲ್ಲೂ 2 ಕೆ.ಜಿ. ತೂಕದ ಗಾಂಜಾ ಇದೆ. ವಶಪಡಿಸಿಕೊಂಡಿರುವ ಗಾಂಜಾದ ಒಟ್ಟು ತೂಕ ಸುಮಾರು 2 ಟನ್​ ಇದ್ದು, ಇದರ ಮೌಲ್ಯ 15 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೆಂಗಳೂರು ವಲಯದ ಎನ್​ಸಿಬಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಗಾಂಜಾ ಇದೇ ಮೊದಲ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net