ನಟ ದಳಪತಿ ವಿಜಯ್ ರಾಜ್ಯ ಪ್ರವಾಸಕ್ಕೆ ಭಾರಿ ಜನಸ್ತೋಮ; ಡಿಎಂಕೆಯ ಸೈದ್ದಾಂತಿಕತೆ ಉಲ್ಲೇಖಿಸಿ ಪರೋಕ್ಷವಾಗಿ ಸಿಎಂ ಎಂ.ಕೆ.ಸ್ಟಾಲಿನ್ ಟೀಕೆ| M K Stalin

Untitled design (19)
Published on

M K Stalin: ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ಹೊಸ ಪಕ್ಷ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿದ್ದು, ಇತರೆ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆ. ಚುನಾವಣೆಗೆ ತಯ್ಯಾರಿ ಹಿನ್ನೆಲೆ ಈ ವಾರದಿಂದ ಅವರು ಕೈಗೊಂಡಿರುವ ರಾಜ್ಯಪ್ರವಾಸದ ಮೊದಲ ಜಿಲ್ಲೆ ತಿರುಚ್ಚಿಯಲ್ಲಿ ಶನಿವಾರ(ಸೆ.13) ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಭಾರಿ ಜನಸ್ತೋಮದ ಬೆಂಬಲ ಸಿಕ್ಕಿದೆ.

ನಟ ವಿಜಯ್​ಗೆ ಭಾರಿ ಜನಸಮೂಹವನ್ನು ಸೆಳೆಯುತ್ತಿದ್ದಂತೆ, ತಮಿಳುನಾಡು ಡಿಎಂಕೆ ಅಧ್ಯಕ್ಷ, ಸಿಎಂ ಎಂ.ಕೆ.ಸ್ಟಾಲಿನ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ಸೆ. 17ರಂದು ಡಿಎಂಕೆಯ 75 ವರ್ಷಗಳ ಇತಿಹಾಸವನ್ನು ಪುನರ್ವಿಮರ್ಶಿಸಲು, ಪಕ್ಷದಲ್ಲಿರುವ ಪ್ರತಿಯೊಬ್ಬರನ್ನು ಪ್ರೇರೇಪಿಸಲು ‘ಮುಪ್ಪೆರುಮ್ ವಿಝಾ’ ಕಾರ್ಯಕ್ರಮ ಆಯೋಜಿಸಿದ್ದು, ಅದಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಪತ್ರಿಕಾ ಹೇಳಿಕೆಯಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಟಿವಿಕೆ ಮತ್ತು ವಿಜಯ್ ಅವರನ್ನು ಟೀಕಿಸಿದ್ದಾರೆ ಎಂದು ವರದಿಯಾಗಿದೆ.

ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಡಿಎಂಕೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಉನ್ಮಾದದ, ಸೈದ್ಧಾಂತಿಕವಲ್ಲದ ಸಭೆಗಳನ್ನು ನಡೆಸುವ ಪಕ್ಷವಲ್ಲ. ನಾವು ಸೈದ್ಧಾಂತಿಕ ಬೆಟಾಲಿಯನ್ ಆಗಿ ಒಟ್ಟುಗೂಡುತ್ತೇವೆ. ಆದರ್ಶಗಳೊಂದಿಗೆ ಯೋಧರಾಗಿ ಚದುರಿಹೋಗುತ್ತೇವೆ. ನಾನು ಮತ್ತು ನಮ್ಮ ಸಹೋದರರು 'ಮುಪ್ಪೆರುಮ್ ವಿಝಾ'ದಲ್ಲಿ ಉಕ್ಕಿನಿಂದ ಮಾಡಿದ ಡಿಎಂಕೆ ಸೈದ್ಧಾಂತಿಕವಾಗಿ ಬಲವಾದ ಕೋಟೆಯಾಗಿದ್ದು, ಅದನ್ನು ಹಳೆಯ ಮತ್ತು ಹೊಸ ಶತ್ರುಗಳು ಮುಟ್ಟಲು ಸಹ ಸಾಧ್ಯವಿಲ್ಲ ಎಂದು ಸಂಕಲ್ಪ ಮಾಡಬೇಕು ಎಂದು  ಹೇಳಿದ್ದಾರೆ.

ತಮಿಳುನಾಡು ಕಳೆದ 4 ವರ್ಷಗಳಲ್ಲಿ ಬಿಜೆಪಿ ವಂಚನೆ, ಎಐಎಡಿಎಂಕೆಯ ದ್ರೋಹದಿಂದಾದ ಹಿನ್ನಡೆಳಿಂದ ಚೇತರಿಸಿಕೊಂಡು, ಗಮನಾರ್ಹವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ನಾವು ಎರಡಂಕಿಯ ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದ್ದೇವೆ.  ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ, ಆರೋಗ್ಯದಲ್ಲಿ ಹೊಸ ಎತ್ತರವನ್ನು ತಲುಪಿದ್ದೇವೆ. ನಮ್ಮ ರಾಜ್ಯವು ದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿದೆ. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಮಹಿಳಾ ಅಭಿವೃದ್ಧಿ ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುತ್ತಿದೆ. ದ್ರಾವಿಡ ಮಾದರಿ ಸರ್ಕಾರವು ತನ್ನ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮವಾಗಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳು ಸಹ ತಮಿಳುನಾಡಿನ ಸಾಧನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net