ಇಂಡಿಯಾ-ಪಾಕ್ ಕ್ರಿಕೆಟ್; ಪಂದ್ಯ ಪ್ರಸಾರ ಮಾಡಿದ್ರೆ, ಟಿವಿ ಸೆಟ್ ಹೊಡೆದಾಕುತ್ತೇವೆ; ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಶಿವಸೇನೆ ಎಚ್ಚರಿಕೆ| India-Pak Cricket

Untitled design (18)
Published on

India-Pak Cricket: ಇಂದು(ಸೆ. 14) ರಾತ್ರಿ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ಮುಂಬೈ ಸೇರಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಪ್ರಸಾರ ಮಾಡಿದ್ರೆ, ಆ ಎಲ್ಲಾ ಟಿವಿ, ಎಲ್​ಇಡಿ ಸೆಟ್​ಗಳನ್ನು ಪುಡಿಪುಡಿ ಮಾಡುತ್ತೇವೆ ಎಂದು ಶಿವಸೇನಾ(ಯುಬಿಟಿ) ನಾಯಕ ಶರದ್ ಕೋಲಿ ಮಾಲೀಕರಿಕೆ ಎಚ್ಚರಿಕೆ ನೀಡಿದ್ದಾರೆ.

ಕ್ರಿಕೆಟ್ ಬ್ಯಾಟ್ ತೋರಿಸಿ ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ಅವರು, ಈ ಪಂದ್ಯ ನಮ್ಮ ಹುತಾತ್ಮರ ರಕ್ತಕ್ಕೆ ಮಾಡಿದ ಅವಮಾನ. ಯಾವುದೇ ಹೋಟೆಲ್ ಇದನ್ನು ತೋರಿಸಲು ಧೈರ್ಯ ಮಾಡಿದರೆ, ನಾವೇ ಪರದೆಗಳನ್ನು ಒಡೆಯುತ್ತೇವೆ. ಪಾಕಿಸ್ತಾನದ ಭಯೋತ್ಪಾದಕರು ಭಾರತೀಯ ತಾಯಂದಿರು ಮತ್ತು ಸಹೋದರಿಯರ ಹಣೆಯ ಮೇಲಿನ ಸಿಂಧೂರವನ್ನು ಒರೆಸಿದೆ. ನೀವು ಈ ದೇಶವನ್ನು ಪ್ರೀತಿಸುತ್ತಿದ್ದರೆ, ಪಂದ್ಯವನ್ನು ತೋರಿಸಬೇಡಿ ಎಂದು ಹೇಳಿದ್ದಾರೆ.

ಈಗಾಗಲೇ ಪಾಕ್ ಜೊತೆಗಿನ ಪಂದ್ಯ ಕುರಿತು ಮಾತನಾಡಿರುವ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿಯವರ ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಹೇಳಿಕೆ ಉಲ್ಲೇಖಿಸಿ, "ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ಹೇಗೆ ಸಾಧ್ಯ" ಎಂದು ಪ್ರಶ್ನಿಸಿದ್ದಾರೆ. ಇವರು ದೇಶಭಕ್ತಿಯನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ ಹಣ ಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದಾದ್ಯಂತ ಭಾನುವಾರ ಮನೆಗಳಿಂದ ಸಿಂಧೂರವನ್ನು ಸಂಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಗೆ ಸಾಂಕೇತಿಕ ಪ್ರತಿಭಟನೆಯಾಗಿ ಕಳುಹಿಸುವ ಯೋಜನೆಯನ್ನು ಶಿವಸೇನೆಯ ಮಹಿಳಾ ವಿಭಾಗ ಪ್ರಕಟಿಸಿದೆ. ಜೊತೆಗೆ ಪಂದ್ಯದ ಸುತ್ತಲಿನ ಕೋಲಾಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ #BoycottIndPakMatch ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ಮಾಜಿ ಕ್ರಿಕೆಟಿಗರು, ನಿವೃತ್ತ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪಂದ್ಯ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯ ಭಾನುವಾರ ರಾತ್ರಿ 8 ಗಂಟೆಗೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಸಲ್ಮಾನ್ ಅಲಿ ಅಘಾ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net