

ಹುಬ್ಬಳ್ಳಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಪಾಗಲ್ ಪ್ರೇಮಿಯೊಬ್ಬ ಯುವತಿಯ ತಲೆಗೆ ಮಚ್ಚಿನಿಂದ ಹಲ್ಲೆಗೈದ ಘಟನೆ ದೇಶಪಾಂಡೆ ನಗರದ ಪ್ರವಾಸಿ ಮಂದಿರದ ಬಳಿ ಸೋಮವಾರ ನಡೆದಿದೆ.
ದೇಶಪಾಂಡೆ ನಗರದ ಆಶಾ ದೋಬಿ ಅಕ್ಸರ (21) ಹಲ್ಲೆಗೀಡಾದ ಯುವತಿ. ರಾಮಾಪುರ ಗ್ರಾಮದ ಇಸ್ಮಾಯಿಲ್ ಕುಂಕೂರ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ. ಮೂಲತಃ ಮೊರಬ ಗ್ರಾಮದ ಆಶಾ 10 ವರ್ಷದಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ನಗರದ ಸೀಮಾ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನಿತ್ಯ ಆಶಾಳನ್ನು ಅಂಗಡಿಗೆ ಡ್ರಾಪ್ ಮಾಡುತ್ತಿದ್ದ ಇಸ್ಮಾಯಿಲ್ ಇಂದು ಆಕೆ ನಡೆದುಕೊಂಡು ಹೊರಟಿದ್ದಾಗ ಮಚ್ಚಿನಿಂದ ಹೊಡೆದಿದ್ದಾನೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿ, ಆಶಾಳನ್ನು ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಪ್ರಜ್ಞಾವಸ್ಥೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)