ಹೆಸರು ತಂದಿಟ್ಟ ಗ್ರಹಚಾರ: ಜಾಮೀನು ಸಿಕ್ಕರೂ ಎಂಟು ತಿಂಗಳು ಮಾಡಲಿಲ್ಲ ಬಿಡುಗಡೆ!

bail
Published on

ಅಲಹಾಬಾದ್​: ಅದೃಷ್ಟ ಕೈಕೊಟ್ಟರೆ, ಗ್ರಹಚಾರ ನೆಟ್ಟಗಿಲ್ಲದಿದ್ದರೆ ಎಲ್ಲವೂ ಬುಡಮೇಲಾಗುತ್ತದೆ ಎನ್ನುವ ಮಾತಿದೆ. ಅಂಥದ್ದೇ ಒಂದು ಮಾತು ಕೈದಿಯೊಬ್ಬನಿಗೆ ಅನ್ವಯ ಆಗುತ್ತಿದೆ.

ಮಾದಕ ದ್ರವ್ಯ ಕಾಯ್ದೆ ಅಡಿ ಬಂಧಿತನಾಗಿರುವ ಆರೋಪಿಯೊಬ್ಬನಿಗೆ ಹೈಕೋರ್ಟ್​ ಜಾಮೀನು ಕೊಟ್ಟರೂ, ಎಂಟು ತಿಂಗಳು ಆತನ ಬಿಡುಗಡೆಯಾಗಲಿಲ್ಲ. ಇದಕ್ಕೆ ಕಾರಣ ಆತನ ಹೆಸರು!

ಇಂಥದ್ದೊಂದು ದುರದೃಷ್ಟವಂತನ ಹೆಸರು ವಿನೋದ್ ಕುಮಾರ್​ ಬರುವಾರ್', ಡ್ರಗ್ಸ್​ ಕೇಸ್​ನಲ್ಲಿ ಈತನ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಅಲಹಾಬಾದ್​ ಜೈಲಿನಲ್ಲಿ ಈತ ಕಳೆದೊಂದು ವರ್ಷದಿಂದ ಬಂಧಿಯಾಗಿದ್ದಾನೆ. ಜಾಮೀನು ಕೋರಿ ಈತ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್​, ಎಂಟು ತಿಂಗಳ ಹಿಂದೆಯೇ ಜಾಮೀನು ಮಂಜೂರು ಮಾಡಿದೆ.

ಮೊದಲು ಸೆಷನ್ಸ್ ಕೋರ್ಟ್​ ಈತನಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಆತ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದಾಗ, ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು.

ಇನ್ನು ತಾನು ಜೈಲಿನಿಂದ ಬಿಡುಗಡೆ ಹೊಂದುತ್ತೇನೆ ಎಂದು ಕುಣಿಯುತ್ತಿದ್ದ ವಿನೋದ್​ಗೆ ಬರಸಿಡಿಲು ಬಡಿದಂತಾಯಿತು. ಏಕೆಂದರೆ, ಈತನನ್ನು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದರು. ಅದಕ್ಕೆ ಕಾರಣ, ಜಾಮೀನು ಸಿಕ್ಕಿರುವುದು ನಿನಗಲ್ಲ. ಬೇರೊಬ್ಬ ವಿನೋದ್ ಬರುವಾರ್​ಗೆ ಎನ್ನುವುದು ಅವರ ವಾದ. ಆದರೆ ತಾನೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನನಗೇ ಸಿಕ್ಕಿದ್ದು ಎಂದು ಈತನ ವಾದ.

ಅಷ್ಟಕ್ಕೂ ಆಗಿದ್ದೇನೆಂದರೆ ಜಾಮೀನು ಸಿಕ್ಕಿದ್ದು ಇದೇ ವಿನೋದ್ ಕುಮಾರ್​ ಬರುವಾರ್​ಗೆ. ಆದರೆ ಜಾಮೀನು ಅರ್ಜಿಯ ಆದೇಶ ಟೈಪಿಸುವಾಗ ಕುಮಾರ ಬಿಟ್ಟುಬಿಟ್ಟಿದ್ದಾರೆ. ಅದರಲ್ಲಿ ವಿನೋದ್​ ಬರುವಾರ್​ ಅಷ್ಟೇ ಇತ್ತು. ಆದ್ದರಿಂದ ಕುಮಾರ ಇಲ್ಲದಿದ್ದ ಮೇಲೆ ಜೈಲಿನಿಂದ ಬಿಡುಗಡೆ ಸಾಧ್ಯವಿಲ್ಲ ಎಂದು ಜೈಲಾಧಿಕಾರಿಗಳು ಹೇಳಿಬಿಟ್ಟರು.

ನಂತರ ವಿನೋದ್​ ಮತ್ತೊಂದು ಅರ್ಜಿಯನ್ನು ಕೋರ್ಟ್​ಗೆ ಸಲ್ಲಿಸಬೇಕಾಗಿ ಬಂತು. ಅದಾಗಲೇ ಲಾಕ್​ಡೌನ್​, ಕರೊನಾವೈರಸ್​ ಎಂದೆಲ್ಲಾ ಕೋರ್ಟ್​ ಮುಚ್ಚಿದ್ದರಿಂದ ಇದೀಗ ಕೋರ್ಟ್​ನಲ್ಲಿ ಈತನ ಅರ್ಜಿ ವಿಚಾರಣೆಗೆ ಬಂದಿದೆ.

ಜಾಮೀನು ಸಿಕ್ಕರೂ ಎಂಟು ತಿಂಗಳ ಕಾಲ ಅಕ್ರಮ ಬಂಧನದಲ್ಲಿರಿಸಿದ್ದಕ್ಕಾಗಿ ಅಲಹಾಬಾದ್ ಹೈಕೋರ್ಟ್ ಸಿದ್ಧಾರ್ಥ್ ನಗರ ಜಿಲ್ಲಾ ಜೈಲಿನ ಅಧೀಕ್ಷಕರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಇದೀಗ ವಿನೋದ ಕುಮಾರ ಜೈಲಿನಿಂದ ಕೊನೆಗೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net