ಐದೇ ದಿನದಲ್ಲಿ ಎರಡು ಮದುವೆಯಾಗಿ ಟೆಕ್ಕಿ ಪರಾರಿ: ರಹಸ್ಯ ಮದ್ವೆ ಬಯಲಾದ ಕತೆಯೇ ರೋಚಕ!

Software Engineer
Published on

ಭೋಪಾಲ್​: ಸಾಫ್ಟ್​ವೇರ್​ ಇಂಜಿನಿಯರ್​ ಓರ್ವ ಐದೇ ದಿನದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿ ಇಬ್ಬರಿಗೂ ಕೈಕೊಟ್ಟು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ನವೀನ್​ ಪಾಂಚಾಲ್ (26)​ ಎಂದು ಗುರುತಿಸಲಾಗಿದೆ. ಈತ ಇಂದೋರ್​ನ ಮುಸಾಖೇದಿ ಏರಿಯಾ ನಿವಾಸಿ. ಡಿಸೆಂಬರ್​ 2ರಂದು ಖಾಂದ್ವಾ ಮೂಲದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಬಳಿಕ ಡಿ. 7ರಂದು ಇಂದೋರ್​ನ ಮೌ ಏರಿಯಾದ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿ ಇದೀಗ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮೊದಲನೇ ಮದುವೆ ಕತೆ

ನಾಲ್ಕು ತಿಂಗಳ ಹಿಂದೆಯೇ ನವೀನ್​ ಕುಟುಂಬ ಖಾಂದ್ವಾ ಮೂಲದ ಮಹಿಳೆಯೊಂದಿಗೆ ನಿಶ್ಚಯ ಮಾಡಿದ್ದರಂತೆ. ನಿಗದಿಯಂತೆ ಮದುವೆ ಸಮಾಜ, ಕುಟುಂಬ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಡಿಸೆಂಬರ್​ 2ರಂದು ನಡೆದಿದೆ. ವಧು ಪೂಜಾ (25) ತಂದೆ ಮೋಹನ್​ ಪಾಂಚಾಲ್​ ಭಾರಿ ವರದಕ್ಷಿಣೆಯೊಂದಿಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾಗಿ ಹನಿಮೂನ್​ ಮುಗಿದ ಬೆನ್ನಲ್ಲೇ ಭೋಪಾಲ್​ನಲ್ಲಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಹೋಗಿದ್ದಾನೆ. ಬಳಿಕ ಫೋನ್​ ಮಾಡಿ ಇನ್ನು ಕೆಲವೇ ದಿನ ನಾನೇ ಬಂದು ನಿನ್ನನ್ನು ಕರೆದುಕೊಂಡು ಹೋಗುವುದಾಗಿ ನವೀನ್​ ನಂಬಿಸಿದ್ದಾನೆ.

ಎರಡನೇ ಮದುವೆ ಕತೆ

ಮೊದಲನೇ ಹೆಂಡತಿಗೆ ಹೇಳಿ ಬಂದ ನವೀನ್​ ಇತ್ತ ಉಮಾರಿ ಮೌನ ಗಣೇಶ್​ಪುರಿ ಕಾಲನಿಯ ನಂದಿತಾ ಜಾಧವ್​ ಎಂಬಾಕೆಯನ್ನು ವಿವಾಹವಾಗಲು ತಯಾರಿ ನಡೆಸಿ, ಡಿ.7ರಂದು ಮದುವೆಯು ಆಗಿದ್ದಾನೆ. ಈ ಕಾರ್ಯಕ್ರಮಕ್ಕೆ ನವೀನ್ ತಂದೆ ಹಾಜರಿರಲಿಲ್ಲ. ಸ್ನೇಹಿತರನ್ನು ಮದುವೆಗೆ ಕರೆದೊಯ್ದು ತನ್ನ ಸಂಬಂಧಿಕರು ಎಂದು ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.

ನವೀನ್​ ಬಂಡವಾಲ ಬಯಲಾಗಿದ್ಹೇಗೆ?

ಕಾಕತಾಳೀಯ ಎಂಬಂತೆ ಮೊದಲು ನಡೆದಿದ್ದ ಮದುವೆಯಲ್ಲಿ ಪಾಲ್ಗೊಂಡಿದ್ದ ಕೆಲ ಮಂದಿಯನ್ನು ಎರಡನೇ ಮದುವೆಗೂ ಆಹ್ವಾನಿಸಲಾಗಿತ್ತು. ನವೀನ್​ ಎರಡನೇ ಮದುವೆ ವೇಳೆ ವೇದಿಕೆಗೆ ಬರುತ್ತಿದ್ದಂತೆ ಆತನನ್ನು ನೋಡಿ ಮೊದಲ ಹೆಂಡತಿಯ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊಸ ಪತ್ನಿಯ ಜತೆಗಿನ ಫೋಟೋ ತೆಗೆದು ವಾಟ್ಸ್​ಆ್ಯಪ್​ ಮಾಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮೊದಲನೇ ಹೆಂಡತಿ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ನವೀನ್​ ಇದೀಗ ಪರಾರಿಯಾಗಿದ್ದಾನೆ. ಆತನಿಗೆ ಹುಡುಕಾಟವೂ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net