ಪ್ರಭಾಸ್​ಗೂ ಮುನ್ನ ಈ ಚಿತ್ರದಲ್ಲಿ ಯಾರು ನಟಿಸಬೇಕಿತ್ತು ಗೊತ್ತಾ?

Adipurush - Final
Published on

'ಆದಿಪುರುಷ್​' ಎಂಬ ಚಿತ್ರದಲ್ಲಿ ಪ್ರಭಾಸ್​ ಹೀರೋ ಆಗಿ ಅಭಿನಯಿಸುತ್ತಿದ್ದಾರೆ, ಇದೊಂದು ಬಹುಕೋಟಿ ವೆಚ್ಚದ ಥ್ರೀಡಿ ಚಿತ್ರ, ಈ ಚಿತ್ರದಲ್ಲಿ ವಿಲನ್​ ಆಗಿ ಸೈಫ್​ ಅಲಿ ಖಾನ್​ ನಟಿಸಲಿದ್ದಾರೆ ... ಎಂಬ ಸುದ್ದಿಗಳೆಲ್ಲಾ ಗೊತ್ತೇ ಇದೆ. ಈಗ ಚಿತ್ರತಂಡದ ಕಡೆಯಿಂದ ಇನ್ನೂ ಒಂದು ಸುದ್ದಿ ಹೊರಬಿದ್ದಿದೆ.

ಚಿತ್ರದಲ್ಲಿ ಪ್ರಭಾಸ್​ ಏನೋ ಹೀರೋ ಆಗಿ ನಟಿಸುತ್ತಿದ್ದಾರೆ. ಆದರೆ, ಅವರಿಗೂ ಮುನ್ನ ಇನ್ನೊಬ್ಬ ಸ್ಟಾರ್​ ನಟ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಅವರು ಚಿತ್ರದಲ್ಲಿ ನಟಿಸಬೇಕೋ, ಬೇಡವೋ ಎಂದು ಮೀನಾ-ಮೇಷ ಎಣಿಸುತ್ತಾ ಕುಳಿತಿದ್ದರಿಂದ, ಅವರನ್ನು ಬಿಟ್ಟು ಪ್ರಭಾಸ್​ ಮನೆಯತ್ತ ಚಿತ್ರತಂಡ ಹೊರಟಿದೆ. ಕೊನೆಗೆ ಪ್ರಭಾಸ್​ ಆ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

ಇಷ್ಟಕ್ಕೂ ಹಾಗೆ ಯೋಚನೆ ಮಾಡಿದ ಸ್ಟಾರ್​ ನಟ ಯಾರು ಗೊತ್ತಾ? ಹೃತಿಕ್​ ರೋಶನ್​. ಹೌದು, ಈ ಚಿತ್ರದ ನಾಯಕನ ಪಾತ್ರಕ್ಕೆ ನಿರ್ದೇಶಕ ಓಂ ರೌತ್​ ಅವರ ಮೊದಲ ಆಯ್ಕೆಯಾಗಿದ್ದು ಹೃತಿಕ್​ ರೋಶನ್​ ಅಂತೆ. ನಿರ್ದೇಶಕರು ಹೋಗಿ ಹೃತಿಕ್​ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಹೇಳಿದರಂತೆ.

ಆದರೆ, ಹೃತಿಕ್​ ಮಾತ್ರ ಚಿತ್ರ ಮಾಡುತ್ತೀನಿ ಅಂತಲೂ ಹೇಳಲಿಲ್ಲ, ಮಾಡುವುದಿಲ್ಲ ಎಂದೂ ಹೇಳಲಿಲ್ಲ. ನೋಡೋಣ ಎಂದು ಸಮಯ ತೆಗೆದುಕೊಂಡು ಅವರು, ಸಾಕಷ್ಟು ಕಾಯಿಸಿದರಂತೆ. ಹೃತಿಕ್​ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ನಿರ್ದೇಶಕರು ಇನ್ನೊಬ್ಬ ಹೀರೋ ನೋಡೋಣ ಎಂದು ಹೊರಟಿದ್ದಾರೆ. ಆಗ ಅವರ ಮನಸ್ಸಿಗೆ ಬಂದಿದ್ದು ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​.

ಪ್ರಭಾಸ್​ಗೆ ಕಥೆ ಮತ್ತು ಪಾತ್ರ ಹೇಳುತ್ತಿದ್ದಂತೆಯೇ ಅವರು ಒಪ್ಪಿಕೊಂಡು ಚಿತ್ರದಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ. 'ಆದಿಪುರುಷ್​' ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿವೆ. ಬಹುಶಃ 2021ರ ಮಧ್ಯಭಾಗದಲ್ಲಿ ಈ ಚಿತ್ರ ಪ್ರಾರಂಭವಾಗಿ 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net