ಐಪಿಎಲ್​ ಇತಿಹಾಸದಲ್ಲಿ ಈವರೆಗೂ ಎಂ.ಎಸ್​. ಧೋನಿ ಎಷ್ಟು ಭಾರಿ ಡಕ್​ ಔಟ್​ ಆಗಿದ್ದಾರೆ?

Dhoni Duck out
Published on

ಚೆನ್ನೈ: ಪ್ರಸಕ್ತ ಐಪಿಎಲ್​ ಟೂರ್ನಿ ಆರಂಭವಾದ ಎರಡನೇ ದಿನ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಶನಿವಾರ ನಡೆದ ಎರಡನೇ ಐಪಿಎಲ್​ ಪಂದ್ಯದಲ್ಲಿ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದರು.

ಡೆಲ್ಲಿ ತಂಡದ ಎದುರು 7ನೇ ಕ್ರಮಾಂಕದಕಲ್ಲಿ ಕ್ರೀಸ್​ಗೆ ಇಳಿದ ಧೋನಿ (2 ಬಾಲ್​ 0 ರನ್​) ಅವೇಶ್​ ಖಾನ್​ ಬೌಲಿಂಗ್​ನಲ್ಲಿ ಡಕ್​ ಔಟ್​ ಆದರು. ಧೋನಿ ಅವರು ಪ್ರಸಕ್ತ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿದ್ದು, ಅಭಿಮಾನಿಗಳಿಗೆ ತುಂಬಾ ನಿರಾಸೆ ಮೂಡಿತು.

ಇನ್ನು ಧೋನಿ ಡಕ್​ ಔಟ್​ ಆಗಿದ್ದು ಇದೇ ಮೊದಲೇನಲ್ಲ. ಇದುವರೆಗೂ 4 ಬಾರಿ ಧೋನಿ ಐಪಿಎಲ್​ನಲ್ಲಿ ಶೂನ್ಯ ಸುತ್ತಿದ್ದಾರೆ. 2010ರಲ್ಲಿ ಡಿರ್ಕ್​ ನ್ಯಾನ್ಸ್​ ಮತ್ತು ಶೇನ್​ ವಾಟ್ಸನ್​ ಎರಡು ಬಾರಿ ಡಕ್​ ಔಟ್​ ಆಗಿದ್ದರು. 2015ರಲ್ಲಿ ಹರ್ಭಜನ್​ ಸಿಂಗ್​ ಮತ್ತು ಪ್ರಸ್ತುತ ಅವೇಶ್​ ಖಾನ್​ ಅವರಿಗೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರಿಷಭ್ ಪಂತ್, ಸಿಎಸ್‌ಕೆ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ (54 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಆಕರ್ಷಕ ಅರ್ಧಶತಕ, ಡೆತ್ ಓವರ್‌ಗಳಲ್ಲಿ ರವೀಂದ್ರ ಜಡೇಜಾ-ಸ್ಯಾಮ್ ಕರ‌್ರನ್ ಜೋಡಿಯ ಅಬ್ಬರದ ಫಲವಾಗಿ ಸಿಎಸ್‌ಕೆ ತಂಡ 7 ವಿಕೆಟ್‌ಗೆ 188 ರನ್ ಕಲೆಹಾಕಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್‌ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net