ಮುಂಬೈ: ಐಪಿಎಲ್ 14ನೇ ಆವೃತ್ತಿಯ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಿದ್ದರೂ, ಪಂದ್ಯಗಳೇನೂ ಸಂಪೂರ್ಣ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿಲ್ಲ. ಬಿಸಿಸಿಐ ಅಧಿಕಾರಿಗಳು ಪಂದ್ಯವನ್ನು ಕ್ರೀಡಾಂಗಣದಲ್ಲೇ ವೀಕ್ಷಿಸುತ್ತಿದ್ದಾರೆ. ಚೆನ್ನೈನಲ್ಲಿ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್-ಆರ್‌ಸಿಬಿ ನಡುವಿನ ಮೊದಲ ಪಂದ್ಯವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾ ಮತ್ತಿತರರು ಎಂಎ ಚಿದಂಬರಂ ಕ್ರೀಡಾಂಗಣದೊಳಗೆ ಕುಳಿತು ವೀಕ್ಷಿಸಿದ್ದರು. ಆದರೆ ಶನಿವಾರದಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳನ್ನು ವೀಕ್ಷಿಸಲು ಬಿಸಿಸಿಐ ಅಧಿಕಾರಿಗಳೂ ಸುಮ್ಮನೆ ಹೋಗುವಂತಿಲ್ಲ. ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯರು ಕೋವಿಡ್-19 ನೆಗಟಿವ್ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತಿಳಿಸಿದೆ.
‘ಬಿಸಿಸಿಐ ಸೂಚನೆಯಂತೆ ಎಲ್ಲ ಪದಾಧಿಕಾರಿಗಳು ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸುವಾಗ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಪಂದ್ಯದ ದಿನಕ್ಕೆ 48 ಗಂಟೆ ಮುನ್ನ ನಡೆಸಲಾದ ಪರೀಕ್ಷೆಯ ನೆಗೆಟಿವ್ ವರದಿ ಇದ್ದರೆ ಮಾತ್ರ ಕ್ರೀಡಾಂಗಣದೊಳಗೆ ಪ್ರವೇಶ ನೀಡಲಾಗುವುದು’ ಎಂದು ಎಂಸಿಎ ಕಾರ್ಯದರ್ಶಿ ಸಂಜಯ್ ನಾಯ್ಕ, ಎಲ್ಲ ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ 14ನೇ ಆವೃತ್ತಿಯಲ್ಲಿ ಹೊಸದೇನಿದೆ ಗೊತ್ತೇ?
ಈಗಾಗಲೆ ಕರೊನಾ ಲಸಿಕೆ ಹಾಕಿಸಿಕೊಂಡಿರುವವರು ಕೂಡ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ಪಂದ್ಯ ವೀಕ್ಷಿಸಲು ಕ್ರೀಡಾಂಗಣ ಪ್ರವೇಶಿಸುವ ಮುನ್ನವೇ ಈ ವರದಿಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರದಿಂದ ಏಪ್ರಿಲ್ 25ರವರೆಗೆ ಒಟ್ಟು 10 ಪಂದ್ಯಗಳು ನಡೆಯಲಿವೆ.
ಐಪಿಎಲ್ ಟೂರ್ನಿಗೆ ಮುನ್ನ, ಮೊದಲಿಗೆ ವಾಂಖೆಡೆ ಕ್ರೀಡಾಂಗಣದ 10 ಗ್ರೌಂಡ್‌ಮನ್‌ಗಳಿಗೆ ಕರೊನಾ ಪಾಸಿಟಿವ್ ವರದಿ ಬಂದಿತ್ತು. ಬಳಿಕ ಮತ್ತೆ ಇಬ್ಬರು ಗ್ರೌಂಡ್‌ಮನ್ ಮತ್ತು ಓರ್ವ ಪ್ಲಂಬರ್ ಪಾಸಿಟಿವ್ ಆಗಿದ್ದರು. ಮುಂಬೈನಲ್ಲಿ ಶುಕ್ರವಾರ 9,200ಕ್ಕೂ ಅಧಿಕ ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣ 5 ಲಕ್ಷ ದಾಟಿವೆ. ಒಟ್ಟು ಸಾವಿನ ಸಂಖ್ಯೆ 12 ಸಾವಿರವನ್ನು ಸಮೀಪಿಸಿದೆ.
ರಾತ್ರೋರಾತ್ರಿ ಸ್ಟಾರ್ ಆದ ಬಳಿಕ ಅನುಭವಿಸಿದ ನೋವಿನ ಕತೆ ಬಿಚ್ಚಿಟ್ಟ ಆರ್‌ಸಿಬಿ ಗರ್ಲ್..!
ಐಪಿಎಲ್ ಕಮಾಲ್: ಹೇಗಿದೆ 8 ತಂಡಗಳ ಬಲಾಬಲ? ವೇಳಾಪಟ್ಟಿ ಒಳಗೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ