

ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥ ನಿರ್ವಹಣೆ ತೋರಿದ ಹಾಲಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರಲ್ಲಿ ಶುಭಾರಂಭ ಕಂಡಿತು. ಯುವ ಬ್ಯಾಟ್ಸ್ಮನ್ ಪೃಥ್ವಿ ಷಾ (72ರನ್, 38 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ಅನುಭವಿ ಶಿಖರ್ ಧವನ್ (85ರನ್, 54 ಎಸೆತ, 10 ಬೌಂಡರಿ, 2 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಯುವ ನಾಯಕ ರಿಷಭ್ ಪಂತ್ ಸಾರಥ್ಯದ ಡೆಲ್ಲಿ ತಂಡ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ರಿಷಭ್ ಪಂತ್ ಐಪಿಎಲ್ನಲ್ಲಿ ನಾಯಕರಾಗಿ ಆಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಯಶ ಕಂಡರು.
ಇದನ್ನೂ ಓದಿ: ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕರೊನಾ ವರದಿ ಕಡ್ಡಾಯ
ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರಿಷಭ್ ಪಂತ್, ಸಿಎಸ್ಕೆ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ (54 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಆಕರ್ಷಕ ಅರ್ಧಶತಕ, ಡೆತ್ ಓವರ್ಗಳಲ್ಲಿ ರವೀಂದ್ರ ಜಡೇಜಾ-ಸ್ಯಾಮ್ ಕರ್ರನ್ ಜೋಡಿಯ ಅಬ್ಬರದ ಫಲವಾಗಿ ಸಿಎಸ್ಕೆ ತಂಡ 7 ವಿಕೆಟ್ಗೆ 188 ರನ್ ಕಲೆಹಾಕಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.4 ಓವರ್ಗಳಲ್ಲಿ 3 ವಿಕೆಟ್ಗೆ 190 ರನ್ಗಳಿಸಿ ಗೆಲುವಿನ ನಗೆ ಬೀರಿತು.
ಸಿಎಸ್ಕೆ: 7 ವಿಕೆಟ್ಗೆ 188 (ಮೊಯಿನ್ ಅಲಿ 36, ಸುರೇಶ್ ರೈನಾ 54, ಅಂಬಟಿ ರಾಯುಡು 23, ರವೀಂದ್ರ ಜಡೇಜಾ 26*, ಸ್ಯಾಮ್ ಕರ್ರನ್ 34, ಕ್ರಿಸ್ ವೋಕ್ಸ್ 18ಕ್ಕೆ 2, ಆವೇಶ್ ಖಾನ್ 23ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್ : 18.4 ಓವರ್ಗಳಲ್ಲಿ 3 ವಿಕೆಟ್ಗೆ 190 (ಪೃಥ್ವಿ ಷಾ 72, ಶಿಖರ್ ಧವನ್ 85, ರಿಷಭ್ ಪಂತ್ 15*, ಮಾರ್ಕಸ್ ಸ್ಟೋಯಿನಿಸ್ 14, ಶಾರ್ದೂಲ್ 53ಕ್ಕೆ 2, ಡ್ವೇನ್ ಬ್ರಾವೊ 28ಕ್ಕೆ 1).