ಢಾಕಾ: ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಬೀಳಲು ಮತ್ತು 300ಕ್ಕೂ ಅಧಿಕ ಮಂದಿಯ ದುರಂತ ಸಾವಿಗೆ ಕಾರಣವಾದಂತಹ ಬಾಂಗ್ಲಾದೇಶದ ಹಿಂಸಾಚಾರದ ಹಿಂದಿರುವ ಪ್ರಮುಖ ಮುಖವೇ ಜಮಾತ್-ಇ-ಇಸ್ಲಾಮಿ ಬಾಂಗ್ಲಾದೇಶ (ಜೆಎಂ ಪಕ್ಷದ ವಿದ್ಯಾರ್ಥಿ ಸಂಘಟನೆ ಇಸ್ಲಾಮಿ ಚತ್ರ ಶಿಬಿರ್ (ಐಸಿಎಸ್) ಎಂದು ಮೂಲಗಳು ತಿಳಿಸಿವೆ. ಈ ಸಂಘಟನೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲ ನೀಡಿದೆ ಎಂದು ನಂಬಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಅನೇಕ ಇಸ್ಲಾಮಿ ಚತ್ರ ಶಿಬಿರ್ ಕೇಡರ್‌ಗಳು ಪ್ರವೇಶ ಪಡೆದಿವೆ. ಇಲ್ಲಿಂದಲೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಸರ್ಕಾರದ ವಿರುದ್ಧ ಪ್ರಚೋದಿಸುವ ಕೆಲಸ ಪ್ರಾರಂಭವಾಯಿತು ಎಂದು ಉನ್ನತ ಮೂಲಗಳು ಮಾಹಿತಿ ನೀಡಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಢಾಕಾ, ಚಿತ್ತಗಾಂಗ್, ಜಹಾಂಗೀರ್, ಸೈಲ್ಹೆತ್ ಮತ್ತು ರಾಜಶಾಹಿ ವಿಶ್ವವಿದ್ಯಾಲಯಗಳೇ ಈ ಇಸ್ಲಾಮಿ ಚತ್ರ ಶಿಬಿರ್ ಸಂಘಟನೆಯ ಮುಖ್ಯ ಕೇಂದ್ರಗಳು. ವಾಸ್ತವವಾಗಿ ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾನಿಲಯ ಚುನಾವಣೆಗಳನ್ನು ಗೆದ್ದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಇಸ್ಲಾಮಿ ಚತ್ರ ಶಿಬಿರ್ ಬೆಂಬಲದೊಂದಿಗೆ ಗೆದ್ದಿವೆ. ಈ ಸಂಘಟನೆಯು ಪಾಕಿಸ್ತಾನ ಐಎಸ್‌ಐ ಜತೆ ನಿಕಟ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ ಮತ್ತು ಈ ಸಂಘಟನೆಯ ಅನೇಕರು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರೆ.
ಇನ್ನು ಐಎಸ್‌ಐ ಸದಸ್ಯರು ವಿದ್ಯಾರ್ಥಿಗಳ ನಕಲಿ ಡಿಪಿಗಳನ್ನು ಹಾಕುವ ಮೂಲಕ ವಿದ್ಯಾರ್ಥಿ ಚಳವಳಿಗೆ ಸೇರಿಕೊಂಡಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದಿಸುವ ದುಷ್ಕೃತ್ಯದಲ್ಲಿ ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ. ಇಸ್ಲಾಮಿ ಛತ್ರ ಶಿಬಿರ್‌ನ ವಿದ್ಯಾರ್ಥಿಗಳು ಐಎಸ್‌ಐ ಹಿಡಿತದಲ್ಲಿ ಸಿಕ್ಕಿಬಿದ್ದಿದ್ದು, ಅವರ ಪ್ರಚೋದನೆಯಂತೆ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಚಳವಳಿ ಹಿಂಸಾಚಾರಕ್ಕೆ ತಿರುಗಿದೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿ ರಾಜಕೀಯ ಹೊರತಾಗಿ ಈ ಸಂಘಟನೆ ಮದರಸಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬಂಧಿತರಾಗಿರುವ ಹೆಚ್ಚಿನ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಸದಸ್ಯರು, ಇಸ್ಲಾಮಿ ಚತ್ರ ಶಿಬಿರ್‌ನ ಕಾರ್ಯಕರ್ತರು. ನೂರುಲ್ ಇಸ್ಲಾಂ, ಬುಲ್ಬುಲ್ ಮೊಹಮ್ಮದ್, ನಜ್ರುಲ್ ಇಸ್ಲಾಂ ಮತ್ತು ಕಮಲ್ ಅಹ್ಮದ್ ಸಿಕ್ದರ್ ಈ ಸಂಘಟನೆಯ ಪ್ರಮುಖ ನಾಯಕರು.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರು ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಮರಳಿದ ನಂತರ ಈ ವರ್ಷ ವೇಗ ಪಡೆದ “ಇಂಡಿಯಾ ಔಟ್” ಅಭಿಯಾನವೂ ಇಸ್ಲಾಮಿ ಛತ್ರ ಶಿಬಿರ್‌ನಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಮಾಲ್ಡೀವ್ಸ್‌ನಲ್ಲಿಯೂ ಇದೇ ರೀತಿಯ ಪ್ರತಿಭಟನೆಯ ಮಾದರಿಯಲ್ಲಿ ಸೃಷ್ಟಿಸಲಾದ ಅಭಿಯಾನದ ಹಿಂದೆ ಪಾಕಿಸ್ತಾನ ಮತ್ತು ಐಎಸ್‌ಐ ಪಿತೂರಿ ಇತ್ತೆಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಬಾಂಗ್ಲಾ ದಂಗೆಯ ಹಿಂದೆ ಪಾಕ್-ಚೀನಾ ಕೈವಾಡ? ಭಾರತದ ನೆರೆರಾಷ್ಟ್ರಗಳೇ ಟಾರ್ಗೆಟ್! ಇದಕ್ಕಿಂತಲೂ ಉದಾಹರಣೆ ಬೇಕಾ?
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಬೇಕಾಗಿಲ್ಲ! ಆಶಿಶ್ ನೆಹ್ರಾ ಅಚ್ಚರಿ ಹೇಳಿಕೆ ಹಿಂದಿದೆ ಈ ಕಾರಣ…