ಬಾಂಗ್ಲಾ ದಂಗೆಯ ಹಿಂದೆ ಪಾಕ್​-ಚೀನಾ ಕೈವಾಡ? ಭಾರತದ ನೆರೆರಾಷ್ಟ್ರಗಳೇ ಟಾರ್ಗೆಟ್​! ಇದಕ್ಕಿಂತಲೂ ಉದಾಹರಣೆ ಬೇಕಾ?

Bangla Pak China

ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಯ ರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ಶೇಖ್​ ಹಸೀನಾ ರಾಜೀನಾಮೆ ನೀಡಿ ದೇಶವನ್ನೇ ತೊರೆದಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಇಡೀ ದೇಶ ಮಿಲಿಟರಿ ಆಡಳಿತದಲ್ಲಿದ್ದು, ಮಧ್ಯಂತರ ಅಥವಾ ಪ್ರಜಾಸತ್ತಾತ್ಮಕವಲ್ಲದ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಸದ್ಯ ರಚನೆಯಾಗುವ ಸರ್ಕಾರ ಆರ್ಮಿ ಚೀಫ್​ ಜನರಲ್​ ವಾಕರ್​-ಉಜ್​-ಜಮಾನ್​ ನಿರ್ದೇಶನದಂತೆ ನಡೆಯಲಿದೆ. ಅಷ್ಟಕ್ಕೂ ಬಾಂಗ್ಲಾದೇಶದ ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದು ಹೇಗೆ? ಇಲ್ಲಿದೆ ಇಂಟೆರೆಸ್ಟಿಂಗ್​ ಮಾಹಿತಿ.

ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್​ಐ ಕುತಂತ್ರವಿರಬಹುದೇ? ಅಂದಹಾಗೆ ಭಾರತ ಮತ್ತು ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ ನಡುವೆ ಉತ್ತಮ ಸಂಬಂಧವಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ತನ್ನ ಬೇಳೆ ಬೇಯಿಸಿಕೊಳ್ಳಲು ಚೀನಾ ಕೂಡ ಈ ಕುತಂತ್ರದಲ್ಲಿ ಭಾಗಿಯಾಗಿರಬಹುದಾ? ಇಂಥದ್ದೊಂದು ಪ್ರಶ್ನೆ ಉದ್ಭವವಾಗಿದ್ದು, ಪಾಕ್​ ಮತ್ತು ಚೀನಾ ಕೈವಾಡವನ್ನು ಸಹ ತಳ್ಳಿಹಾಕುವಂತಿಲ್ಲ.

ಭಾರತದ ನೆರೆಯ ರಾಷ್ಟ್ರಗಳನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಮತ್ತು ಚೀನಾ ಬಹಳ ವರ್ಷಗಳಿಂದ ಕುತಂತ್ರಗಳನ್ನು ಎಣೆಯುತ್ತಲೇ ಇವೆ. ಇದೀಗ ಬಾಂಗ್ಲಾ ವಿಚಾರದಲ್ಲಿ ಶತ್ರುರಾಷ್ಟ್ರಗಳ ಷಡ್ಯಂತ್ರವನ್ನು ನಿರ್ಲಕ್ಷಿಸುವಂತಿಲ್ಲ. ಈ ಬಗ್ಗೆ ಅನುಮಾನ ಬಲವಾಗಿದೆ. ನಿಮಗೆ ಗೊತ್ತಿರಬಹುದು ಈ ಹಿಂದೆ ಶ್ರೀಲಂಕಾದ ಹೀನಾಯ ಆರ್ಥಿಕ ಪರಿಸ್ಥಿತಿಗೆ ಚೀನಾ ನೇರವಾಗಿ ಕಾರಣವಾಗಿತ್ತು. ಇಂದು ಬಾಂಗ್ಲಾಗೆ ಬಂದಿರುವ ಸ್ಥಿತಿ ಬಹಳ ಹಿಂದೆಯೇ ಲಂಕಾಗೂ ಬಂದಿತ್ತು. ಚೀನಾ ಕೊಟ್ಟ ಸಾಲವೇ ಹಣದುಬ್ಬರ ಮತ್ತು ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು. ಇನ್ನು ನೆರೆಯ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಲು ತಾಲಿಬಾನ್​ ಉಗ್ರರಿಗೆ ಪಾಕಿಸ್ತಾನ ಬಹಿರಂಗವಾಗಿಯೇ ನೆರವು ನೀಡಿತು. ಇನ್ನು ಚೀನಾ ಕಾರಣದಿಂದಾಗಿ ನೇಪಾಳದಲ್ಲಿ ಆಗಾಗ ಅಧಿಕಾರ ಬದಲಾವಣೆ ಆಗುತ್ತಲೇ ಇರುತ್ತದೆ.

2021ರಲ್ಲಿ ತಾಲಿಬಾನ್​ ಉಗ್ರರು ಅಫ್ಘಾನಿಸ್ತಾವನ್ನು ವಶಕ್ಕೆ ಪಡೆದುಕೊಂಡು ಪ್ರಜಾಪ್ರಭುತ್ವ ಸರ್ಕಾರದ ಬದಲು ತಮ್ಮದೇ ಸರ್ಕಾರವನ್ನು ರಚನೆ ಮಾಡಿದರು. ಇಂದಿಗೂ ತಾಲಿಬಾನ್​ ಆಡಳಿತ ಜಾರಿಯಲ್ಲಿದ್ದು, ಅಫ್ಘಾನ್​ ಜನರು ನಿತ್ಯವೂ ಸಾವಿನ ಭಯದಿಂದಲೇ ಬದುಕು ನಡೆಸುತ್ತಿದ್ದಾರೆ. ಇದೇ ಅಫ್ಘಾನಿಸ್ತಾನಕ್ಕೆ ಭಾರತ ಸ್ನೇಹ ರಾಷ್ಟ್ರವಾಗಿತ್ತು. ಸಾಕಷ್ಟು ಹಣಕಾಸಿನ ನೆರವು ಸಹ ನೀಡಿತ್ತು. ಅಲ್ಲದೆ, ಅಫ್ಘಾನಿಸ್ತಾನದಲ್ಲಿ ಮೂಲ ಸೌಕರ್ಯಗಳನ್ನು ಸಹ ಭಾರತ ನಿರ್ಮಾಣ ಮಾಡಿತ್ತು. ಆಫ್ಘಾನ್​ ಕೂಡ ಭಾರತಕ್ಕೆ ಋಣಿಯಾಗಿತ್ತು. ಉಭಯ ರಾಷ್ಟ್ರಗಳ ಸಂಬಂಧ ತುಂಬಾ ಚೆನ್ನಾಗಿಯೇ ಇತ್ತು. ಆದರೆ, ತಾಲಿಬಾನ್​ ಆಡಳಿತ ಬಳಿಕ ಆ ಸಂಬಂಧ ಮುರಿದುಬಿದ್ದಿದೆ.

2021ರಲ್ಲಿ ಮಯನ್ಮಾರ್​ನಲ್ಲಿ ಚುನಾಯಿತ ಸರ್ಕಾರವನ್ನು ಬದಿಗೊತ್ತಿ ಮಿಲಿಟರಿ ತನ್ನದೇಯಾದ ಸರ್ಕಾರ ರಚನೆ ಮಾಡಿ, ನಿಯಮಗಳನ್ನು ಸಹ ಜಾರಿ ಮಾಡಿದೆ. 2022ರಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದ ಕಾರಣ ಶ್ರೀಲಂಕಾ ಅಂದಿನ ಅಧ್ಯಕ್ಷ ಗೋತಬಯ ರಾಜಪಕ್ಷ ದೇಶವನ್ನು ತೊರೆದರು. ಇದೀಗ 2024ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ರಾಜೀನಾಮೆ ನೀಡುವುದು ಮಾತ್ರವಲ್ಲದೆ ದೇಶದಿಂದ ಪಲಾಯನ ಮಾಡಬೇಕಾಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಸುತ್ತಲಿನ ದೇಶಗಳಲ್ಲಿ ಸಾಕಷ್ಟು ದಂಗೆಗಳು ಸಂಭವಿಸಿವೆ. ಈ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದವು. ಈ ದೇಶಗಳೊಂದಿಗೆ ಭಾರತದ ಸಂಬಂಧ ಹದಗೆಡಬೇಕೆಂದು ಬಯಸುವವರು ಇದ್ದಾರೆ. ಆ ರಾಷ್ಟ್ರಗಳು ಯಾವುವು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದು ಎಲ್ಲರಿಗೂ ಗೊತ್ತಿದೆ.

ಪಾಕಿಸ್ತಾನ ಮತ್ತು ಚೀನಾ ಮೇಲೆ ಅನುಮಾನ ಏಕೆ?
ಬಾಂಗ್ಲಾದೇಶವು 1971ರಲ್ಲಿ ಸ್ವಾತಂತ್ರ್ಯವನ್ನು ಪಡೆದಾಗಿನಿಂದ ಪಾಕಿಸ್ತಾನವು ನಿರಂತರವಾಗಿ ಬಾಂಗ್ಲಾವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿನ ದಂಗೆಯಲ್ಲಿ ಐಎಸ್​ಐ ಕೂಡ ಒಂದು ಪಾತ್ರವನ್ನು ವಹಿಸಿದೆ ಎನ್ನಲಾಗಿದೆ. ಈ ಪ್ರತಿಭಟನೆಯ ಹಿಂದೆ ಉಗ್ರರ ಕೈವಾಡದ ಜತೆಗೆ ಕೆಲ ಎನ್‌ಜಿಒಗಳು ಸಹ ಪಾತ್ರವೂ ಇದೆ. ಐಎಸ್‌ಐನಿಂದ ಈ ಪ್ರತಿಭಟನೆಗೆ ಹಣದ ನೆರವು ಸಿಕ್ಕಿದೆ ಎಂಬ ಮಾಹಿತಿ ಇದೆ.

ಇನ್ನು ಚೀನಾ ವಿಚಾರಕ್ಕೆ ಬರುವುದಾದರೆ, ಭಾರತದೊಂದಿಗೆ ಶೇಖ್ ಹಸೀನಾ ಅವರ ಬಲವಾದ ಬಾಂಧವ್ಯದಿಂದಾಗಿ ಈ ಹಿಂದೆ ತನ್ನ ಹೂಡಿಕೆಯ ಪ್ರಯತ್ನಗಳಲ್ಲಿ ವಿಫಲವಾದ ಚೀನಾ, ಈಗ ದಂಗೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರಬಹುದು ಎಂಬ ಗುಮಾನಿ ಎಬ್ಬಿದೆ. ಪ್ರಸ್ತುತ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಚೀನಾ ಖಂಡಿತ ಮಾಡಲಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.

ಅಂದಹಾಗೆ ವಾಕಾರ್-ಉಜ್-ಜಮಾನ್ ಅವರು ಜೂನ್‌ನಲ್ಲಿ ಬಾಂಗ್ಲಾದೇಶದ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಮುಂದೆ ಮೂರು ವರ್ಷಗಳ ಅಧಿಕಾರಾವಧಿ ಇದೆ. ಆದರೆ, ಕೇವಲ ಆರು ವಾರಗಳಲ್ಲಿ ಅವರು ಪ್ರಜಾಪ್ರಭುತ್ವ ಸರ್ಕಾರವನ್ನು ದೇಶದಿಂದ ಹೊರಹಾಕಿದ್ದಾರೆ. ಇದೀಗ ಬಾಂಗ್ಲಾದೇಶದ ಸೇನಾ ಕ್ರಮಗಳು ಭಾರೀ ಪರಿಶೀಲನೆಗೆ ಒಳಪಟ್ಟಿವೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಸೇನೆಯು ಗುಂಡು ಹಾರಿಸಿದ ನಂತರ ದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದನ್ನು ಮರೆಯುವಂತಿಲ್ಲ. ಐತಿಹಾಸಿಕವಾಗಿಯು ಬಾಂಗ್ಲಾದೇಶದ ಸೇನಾ ದಾಖಲೆಗಳು ತುಂಬಾ ಆತಂಕಕಾರಿಯಾಗಿದೆ. 1975ರಲ್ಲಿ ಸೈನ್ಯವು ದಂಗೆಯನ್ನು ನಡೆಸಿತು. ಅಂದಿನ ಪ್ರಧಾನ ಮಂತ್ರಿ ಮುಜಿಬುರ್ ರೆಹಮಾನ್ ಅವರ ಸರ್ಕಾರವನ್ನು ಸಹ ಉರುಳಿಸಿತು. ಬಳಿಕ 15 ವರ್ಷಗಳ ಮಿಲಿಟರಿ ಆಡಳಿತಕ್ಕೆ ಈ ಘಟನೆ ಕಾರಣವಾಯಿತು. ಇದೀಗ ಮತ್ತೊಂದು ದಂಗೆ ನಡೆದಿದ್ದು, ಬಾಂಗ್ಲಾದೇಶದಲ್ಲಿ ಸೇನಾ ನಿಯಂತ್ರಣಕ್ಕೆ ಮರಳುವ ಸೂಚನೆ ಸಿಕ್ಕಿದೆ.

ಹಿಂಸಾಚಾರ ಭುಗಿಲೇಳಲು ಕಾರಣ ಏನು?
76 ವರ್ಷ ವಯಸ್ಸಿನ ಶೇಖ್ ಹಸೀನಾ ಕಳೆದ 20 ವರ್ಷಗಳಿಂದ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಪ್ರತಿಭಟನೆಯ ತೀವ್ರತೆ ಕಂಡು ಭಯಭೀತರಾಗಿ, ತಮ್ಮ ಪಿಎಂ ಕುರ್ಚಿಗೆ ರಾಜೀನಾಮೆ ಘೋಷಿಸಿ, ಸದ್ದಿಲ್ಲದಂತೆ ದೇಶ ತೊರೆಯುವ ಮುಖೇನ ಪಲಾಯನ ಮಾಡಿದ್ದಾರೆ. ಇಷ್ಟೆಲ್ಲಾ ಗಲಭೆಗೆ ಮೂಲ ಕಾರಣವೇ ವಿವಾದಾತ್ಮಕ ಸರ್ಕಾರಿ ಉದ್ಯೋಗ ಮೀಸಲಾತಿ. 1971ರ ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡವರ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30% ಮೀಸಲಾತಿ ನೀಡಲಾಗಿತ್ತು. ಅಂದಿನಿಂದಲೂ ಇದಕ್ಕೆ ದೊಡ್ಡ ಮಟ್ಟದಲ್ಲಿ ಅಪಸ್ವರ ಕೇಳಿಬಂದಿತ್ತು. ಆದ್ರೆ, ಯಾವಾಗ ಬಾಂಗ್ಲಾ ಸರ್ಕಾರ ಈ ಯೋಜನೆಯನ್ನು ಅವರ ಮುಂದಿನ ತಲೆಮಾರಿಗೂ ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಟ್ಟಿತೋ ಅಲ್ಲೇ ಮೊದಲ ಕಿಡಿ ಹತ್ತಿಕೊಂಡಿತು. 1971ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸ್ವಾತಂತ್ರ್ಯ ಯುದ್ಧದಲ್ಲಿ ಪಾಲ್ಗೊಂಡಿದ್ದವರ ಕುಟುಂಬದ ಸದಸ್ಯರಿಗೆ 30% ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಯೋಜನೆಯನ್ನು ಬಾಂಗ್ಲಾ ಸರ್ಕಾರ ಜಾರಿಗೊಳಿಸಿತ್ತು. ಈ ವ್ಯವಸ್ಥೆಯು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದೆ. ಪ್ರಧಾನಿ ಹಸೀನಾ ತನ್ನ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ವಾದಿಸುತ್ತಾರೆ. 1972ರಲ್ಲಿ ಸ್ಥಾಪಿಸಲಾದ ಕೋಟಾ ವ್ಯವಸ್ಥೆ ಅವಾಮಿ ಲೀಗ್ ಬೆಂಬಲಿಗರಿಗೆ ಸಹಾಯವಾಗುವಂತೆ ಜಾರಿಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಭಾರೀ ಅನ್ಯಾಯವಾಗಿದೆ ಮತ್ತು ಇತರ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಿತಿಗೊಳಿಸಲಾಗುತ್ತಿದೆ. ಕಷ್ಟಪಟ್ಟು ಮುಂದೆ ಬರುವವರಿಗೆ ಈ ಮೀಸಲಾತಿ ಅವಕಾಶ ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಹಸೀನಾ ನೀಡಿದ ಸಾರ್ವಜನಿಕ ಹೇಳಿಕೆಗಳೇ ಇದೀಗ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣ ಎಂಬುದರಲ್ಲಿ ಕಿಂಚಿತ್ತು ಅನುಮಾನವಿಲ್ಲ.

ಪ್ರತಿಭಟನೆ ಸ್ಪೋಟಗೊಂಡಿದ್ದು ಯಾವಾಗ?
ಕಳೆದ ಕೆಲವು ದಿನಗಳಿಂದ ಈ ವಿಷಯವಾಗಿ ಪ್ರತಿಭಟನಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ತೀವ್ರ ಘರ್ಷಣೆ ನಡೆಯುತ್ತಿತ್ತು. ಸರ್ಕಾರದಿಂದ ಬಂದ ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿರುವ ಪ್ರತಿಭಟನಕಾರರು ನಿನ್ನೆ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಪ್ರಾರಂಭಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಗ್ಗೆ “ ತಾರತಮ್ಯ ವಿರೋಧಿ ವಿದ್ಯಾರ್ಥಿ ಸಂಘಟನೆ’ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲಿಗ ಸಂಘಟನೆಗಳಾದ ಅವಾಮಿ ಲೀಗ್ ಛಾತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರು ನುಗ್ಗಿದಾಗ ಗಲಾಟೆ ಆರಂಭವಾಗಿ ಹಿಂಸಾರೂಪ ಪಡೆಯಿತು. ತದನಂತರ ದೇಶದ ಇತರ ಭಾಗಗಳಿಗೂ ಹಬ್ಬಿತು. ನೂರಾರು ಸರ್ಕಾರಿ ವಾಹನಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿ, ಮೀಸಲಾತಿ ರದ್ದುಗೊಳಿಸುವಂತೆ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರಕ್ಕೆ ಮನವಿ ಈ ಮಧ್ಯೆ, ಹಿಂಸಾಚಾರವನ್ನು ರಾಜಕೀಯ ನಿರ್ಧಾರಗಳ ಮೂಲಕ ನಿಯಂತ್ರಣಕ್ಕೆ ತರುವಂತೆ ಕೆಲವು ಮಾಜಿ ಸೇನಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಪ್ರತಿಭಟನೆ ಢಾಕಾದ ಆಸ್ಪತ್ರೆ ಆವರಣದಲ್ಲಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು. ಪರಿಸ್ಥಿತಿ ನಿಯಂತ್ರಣಕ್ಕೆ ಯೋಧರನ್ನು ಬಳಸುವುದು ಬೇಡ ಎಂದು ದೇಶಾದ್ಯಂತ ಕರ್ಪೂ ಜಾರಿಗೊಳಿಸಲಾಗಿದ್ದು, ಇದೀಗ ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಎಸ್​ಎಫ್ ಪಡೆ ಹೈ ಅಲರ್ಟ್​ ಆಗಿ ಕಾರ್ಯನಿರ್ವಹಿಸುತ್ತಿದೆ. (ಏಜೆನ್ಸೀಸ್​)

ಬಾಂಗ್ಲಾದಲ್ಲಿ ಇಷ್ಟೊಂದು ಹಿಂಸಾಚಾರ ಏಕೆ? 300ಕ್ಕೂ ಅಧಿಕ ಸಾವು, ಇಷ್ಟಕ್ಕೆಲ್ಲ ಕಾರಣ ಇದೇ ನೋಡಿ!

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ: ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು

Share This Article

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…