

House Seized: ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಬಾಕಿ ಉಳಿಸಿಕೊಂಡಿದ್ದ ವ್ಯಕ್ತಿಗೆ ನೋಟಿಸ್ ಜಾರಿಗೊಳಿಸಿದ್ದ ಬ್ಯಾಂಕ್ ಸಿಬ್ಬಂದಿಗಳು, ಅದಕ್ಕೂ ಎಚ್ಚೆತ್ತುಕೊಳ್ಳದ ಹಿನ್ನೆಲೆ ಮನೆಯನ್ನೇ ಸೀಜ್ ಮಾಡಿದ್ದಾರೆ. ಇದರಿಂದ ಕಂಗಾಲಾದ ಕುಟುಂಬ, ಮನೆಯೊಳಗಿದ್ದ ಹಾಸಿಗೆ, ಚೇರು, ಫ್ಯಾನ್, ಬಟ್ಟೆಗಳನ್ನು ಮನೆ ಮುಂದಿದ್ದ ಅಂಗಳದಲ್ಲಿಟ್ಟು ಮಲಗಿದ ಘಟನೆ ಕೇರಳದ ಶಾಸ್ತಂಕೋಟದಲ್ಲಿ ವರದಿಯಾಗಿದೆ.
ಸಾಲ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಮನೆ ವಶಪಡಿಸಿಕೊಂಡ ಹಿನ್ನೆಲೆ ವ್ಯಕ್ತಿ ಮತ್ತು ಅವರ ಕುಟುಂಬವು ಕೆಲವು ದಿನಗಳಿಂದ ವರಾಂಡಾದಲ್ಲಿಯೇ ವಾಸಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ. ಶೂರನಾಡ್ ದಕ್ಷಿಣದ ಇರವಿಚಿರಾದ ಪೂರ್ವಕ್ಕೆ ಪುಥೇನ್ ತಮಾಲುವಿನಲ್ಲಿರುವ ಸಂತೋಷ್ ಕುಮಾರ್ ಎಂಬುವವರ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮನೆಯಲ್ಲಿದ್ದ ಕುಟುಂಬಸ್ಥರನ್ನು ಹೊರಹಾಕಿ ಮುಟ್ಟುಗೋಲು ಹಾಕಿಕೊಳ್ಳುವ ಮಂಡಳಿಯನ್ನು ರಚಿಸಿದ ಬ್ಯಾಂಕ್ ಅಧಿಕಾರಿಗಳು, ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕುವ ಮೂಲಕ ನಮ್ಮ ನಿವಾಸಕ್ಕೆ ಬೀಗ ಜಡಿದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. "ಕುಟುಂಬದಲ್ಲಿ ಅವರ ವೃದ್ಧ ಪೋಷಕರು, ಪಿಯುಸಿ ವ್ಯಾಸಂಗ ಮಾಡುತ್ತಿರುವ ಓರ್ವ ಪುತ್ರಿ ಮತ್ತು ಅವರ ಪತ್ನಿ ಇದ್ದಾರೆ. ತಮ್ಮ ಮಗಳು ಪರೀಕ್ಷೆ ಬರೆಯುತ್ತಿದ್ದಾಳೆ. ಈ ಸಮಯದಲ್ಲಿ ಸಾಲ ಮರುಪಾವತಿಸಲು ನನ್ನ ಬಳಿ ಹಣವಿಲ್ಲ. ಸಮಯದ ಅಗತ್ಯವಿದೆ ಎಂದರೂ ಅಧಿಕಾರಿಗಳು ಉದಾಸೀನ ವಹಿಸಿದ್ದಾರೆ" ಎಂದು ಸಂತೋಷ್ ಹೇಳಿದ್ದಾರೆ.
"ಪ್ರಸ್ತುತ ನಾವು ಮನೆಯಿಂದ ಹೊರಗಿರುವ ಕಾರಣ ರಾತ್ರಿಯಲ್ಲಿ ಸೀಮೆ ಎಣ್ಣೆ ದೀಪದಡಿ ನನ್ನ ಮಗಳು ಓದುತ್ತಿದ್ದಾಳೆ. ಬ್ಯಾಂಕ್ ನೌಕರರು ಹೊರಗೆ ಎಸೆದ ಎಲ್ಲಾ ಗೃಹೋಪಯೋಗಿ ವಸ್ತುಗಳನ್ನು ವರಾಂಡಾ ಮತ್ತು ಅಂಗಳದಲ್ಲಿ ಸಂಗ್ರಹಿಸಿದ್ದೇವೆ. ಮಳೆ ಬಂದರೆ ಇದೆಲ್ಲವೂ ಪೂರ್ತಿ ಒದ್ದೆಯಾಗುತ್ತದೆ. ನಮ್ಮ ಕುಟುಂಬದ ಏಕೈಕ ಆರ್ಥಿಕ ಆಧಾರವೇ ನನ್ನ ಪತ್ನಿ ಸಿಂಧು ಅವರು. ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುವ ಸಿಂಧು ಆದಾಯದ ಮೇಲೆಯೇ ಕುಟುಂಬ ನಡೆಯುತ್ತಿದೆ" ಎಂದು ಸಂತೋಷ್ ಅಳಲು ತೋಡಿಕೊಂಡಿದ್ದಾರೆ.
2016ರಲ್ಲಿ ಮನೆ ಕಟ್ಟಲು 15 ಸೆಂಟ್ಸ್ ಭೂಮಿಯನ್ನು ಅಡವಿಟ್ಟು 15 ಲಕ್ಷ ರೂ. ಸಾಲ ಪಡೆದಿದ್ದ ಸಂತೋಷ್, ಕೋವಿಡ್ಗೂ ಮುನ್ನ ಅದನ್ನು ನಿಯಮಿತವಾಗಿ ಮರುಪಾವತಿಸುತ್ತಿದ್ದರು. ಬ್ಯಾಂಕ್ ನಿಯಮದ ಪ್ರಕಾರ, ಸಾಲವನ್ನು 15 ವರ್ಷಗಳಲ್ಲಿ ಮರುಪಾವತಿಸಬೇಕಾಗಿತ್ತು. ಸೌದಿ ಅರೇಬಿಯಾದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಟರ್ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಂತೋಷ್, ಅನಾರೋಗ್ಯಕ್ಕೆ ಒಳಗಾದರು. ತಕ್ಷಣವೇ ಕೆಲಸ ಬಿಟ್ಟು, ಮನೆಗೆ ಮರಳಿದ್ದರು. ಇದೇ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ತಮ್ಮ ವಿದೇಶ ಜೀವನಕ್ಕೆ ಬ್ರೇಕ್ ಹಾಕಿದ ಸಂತೋಷ್, ಸಾಲ ಮರುಪಾವತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಇಲ್ಲಿಯವರೆಗೆ 11 ಲಕ್ಷ ರೂ. ಅಸಲು ಮತ್ತು ಬಡ್ಡಿಯನ್ನು ಪಾವತಿಸಿರುವ ಸಂತೋಷ್, ಬಾಕಿ ಮೊತ್ತ 22 ಲಕ್ಷ ರೂ. ಇದೆ ಎಂದು ವರದಿಯಾಗಿದೆ. ಆದಾಗ್ಯೂ, ಮರುಪಾವತಿ ವಿಳಂಬದ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂತೋಷ್ ನ್ಯಾಯಾಲಯವನ್ನು ಸಂಪರ್ಕಿಸಿದಾಗ ಕಂತುಗಳಲ್ಲಿ ಪಾವತಿಸಲು ಅವರಿಗೆ ಸೂಚಿಸಲಾಯಿತು. ಆದರೆ, ಇದನ್ನು ಅನುಸರಿಸಲಿಲ್ಲ. ಇದರ ನಂತರ 9 ತಿಂಗಳ ಗ್ರೇಸ್ ಅವಧಿಯನ್ನು ನೀಡಲಾಯಿತು ಮತ್ತು ಕಾನೂನು ಕ್ರಮ ಕೈಗೊಳ್ಳಲಾಯಿತು ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).