ಬೆಳ್ತಂಗಡಿ: ಶ್ರೀ ಗುರುದೇವ ಮಠ ದೇವರಗುಡ್ಡ, ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ 65ನೇ ವಷರ್ದ ಶ್ರೀ ರಾಮನಾಮ ಸಪ್ತಾಹ, ಪ್ರತಿಷ್ಠಾಪನಾ ಜಾತ್ರೋತ್ಸವ ಹಾಗೂ ಮಹಾಬ್ರಹ್ಮರಥೋತ್ಸವ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಮಾ.30 ರಿಂದ ಏ.6ರ ತನಕ ನಡೆಯಲಿದೆ ಎಂದು ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ, ಉಭಯ ಜಿಲ್ಲೆಯ ಶಾಸಕರು, ಮಂತ್ರಿಗಳು, ಕ್ಷೇತ್ರದ ಟ್ರಸ್ಟಿಗಳು, ನಾನಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. 30ರಂದು ಬೆಳಗ್ಗೆ ಗಂಟೆ 9.30ಕ್ಕೆ ಶ್ರೀರಾಮ ತಾರಕ ಮಂತ್ರ ಸಪ್ತಾಹ ಹಾಗೂ ಜಾತ್ರೋತ್ಸವದ ಉದ್ಘಾಟನೆ, ಶ್ರೀ ಸಿದ್ಧಿ ವಿನಾಯಕ ಮತ್ತು ಕ್ಷೇತ್ರ ಪಾಲ ಗಣಪತಿ ದೇವರ ಬಲಿ ಉತ್ಸವ ನಡೆಯಲಿದೆ ಎಂದು ಶನಿವಾರ ಶ್ರೀರಾಮ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
31ರಂದು ರಾತ್ರಿ 8ಕ್ಕೆ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರಡಿ ಸಾಯಿಬಾಬಾ ಗುರುಗಳ ಉತ್ಸವ ಮೂರ್ತಿಯ ಬಲಿ ಉತ್ಸವ, ಏ.1ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 8ಕ್ಕೆ ಶ್ರೀರಾಮದೇವರ ರಜತ ಪಾಲಕಿ ಉತ್ಸವ, 2ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 8ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು ಪುಷ್ಪ ರಥೋತ್ಸವ ನಡೆಯಲಿದೆ.
3ರಂದು ರಾತ್ರಿ 8ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರಮಂಡಲೋತ್ಸವ, ಏ.4ರಂದು ರಾತ್ರಿ 7ರಿಂದ ಬಲಿಮೂರ್ತಿ ಬಲಿ ಉತ್ಸವ ಬೆಳ್ಳಿ ರಥೋತ್ಸವ, 5ರಂದು ಸಂಜೆ 5ಕ್ಕೆ ಯಾಗ ಶಾಲಾ ಪ್ರವೇಶ ಭಗವದ್ ವಾಸುದೇವ ಪುಣ್ಯಾಹ, ಪ್ರಧಾನ ಹೋಮಗಳು, ರಾತ್ರಿ 8ಕ್ಕೆ ದತ್ತಾತ್ರೇಯ ಮೂರ್ತಿ ಮತ್ತು ಶ್ರೀ ಆಂಜನೇಯ ದೇವರ ಮೂರ್ತಿ ಬಲಿ ಉತ್ಸವ ಮತ್ತು ಶ್ರೀ ಹನುಮಾನ್ ರಥೋತ್ಸವ ನಡೆಯಲಿದೆ.
6ರಂದು ಬೆಳಗ್ಗೆ 9.30ಕ್ಕೆ ಶ್ರೀರಾಮ ತಾರಕ ಮಂತ್ರ ಯಜ್ಞ ಮಂಗಳಂ, ಮಧ್ಯಾಹ್ನ ಪಾಲಕಿ ಬಲಿ, ಉತ್ಸವ, ರಾತ್ರಿ 7ರಿಂದ ರಕ್ತೇಶ್ವರಿ ಮತ್ತು ಗುಳಿಗ ದೈವಗಳ ನೇಮೋತ್ಸವ ರಾತ್ರಿ 10 ಗಂಟೆಗೆ ಮಹಾ ಬ್ರಹ್ಮ ರಥೋತ್ಸವ ನಡೆಯಲಿದೆ. 8ರಂದು ಆದಿ ಪಜಿರಡ್ಕದಲ್ಲಿ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ರಾತ್ರಿ ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ-ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಮಾ.30ರಿಂದ ಏ.6ರ ತನಕ ಅಹೋರಾತ್ರಿ ಶ್ರೀರಾಮ ತಾರಕ ಮಂತ್ರ ಭಜನೆ ನಡೆಯಲಿದೆ. ನಿತ್ಯ ಬೆಳಗ್ಗೆ ವೈದಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶಾಸಕ ಹರೀಶ್ ಪೂಂಜ, ಜಯಂತ ಕೋಟ್ಯಾನ್, ಪೀತಾಂಬರ ಹೇರಾಜೆ, ಶ್ರೀನಿವಾಸರಾವ್, ಅಭಿನಂದನ್ ಹರೀಶ್ ಕುಮಾರ್, ನಮಿತಾ ಮತ್ತು ತುಕಾರಾಮ ಸಾಲಿಯಾನ್ ಉಪಸ್ಥಿತರಿದ್ದರು.
ಧಾರ್ಮಿಕ ಮೌಲ್ಯ ಬಿತ್ತುವ ಕಾರ್ಯ
ಜನಮಾನಸದ ಮೌಲ್ಯವರ್ಧನೆ, ಅಧ್ಯಾತ್ಮ ಚಿಂತನೆಯನ್ನು ಹೆಚ್ಚಿಸಲು ಜಾತ್ರೆಗಳು ನಡೆಯುತ್ತವೆ. ಆತ್ಮ, ಪರಮಾತ್ಮನಿಂದ ಬಂದದ್ದು ಅವನ ಸೇವೆ ನಡೆಸುವುದು ನಮ್ಮ ಕೈಂಕರ್ಯವಾಗಬೇಕು. ಜನರಲ್ಲಿ ಭಾತೃತ್ವದ ಮೌಲ್ಯ ಬಿತ್ತರಿಸಬೇಕು. ಸಾರ್ವಜನಿಕರು ನೀಡುವ ಸಹಕಾರ ಜಾತ್ರೆಯ ಮೆರುಗನ್ನು ಹೆಚ್ಚಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.