ಬಡ ಕುಟುಂಬಕ್ಕೆ ಸ್ವಂತ ಸೂರು : ಬಹುದಿನಗಳ ಮನೆ ನಿರ್ಮಾಣ ಕನಸು ನನಸು : ದಾನಿಗಳ ಸಹಕಾರ

4
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ ಪಂಜಿಕಲ್ಲು ಗ್ರಾಮದಲ್ಲಿ 10 ವರ್ಷಗಳಿಂದ ಹಂದಿ ಸಾಕಣೆಯ ಗೂಡಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಬಡ ಕುಟುಂಬಕ್ಕೆ ಸುಸಜ್ಜಿತ ಸ್ವಂತ ಮನೆಯ ಕನಸೊಂದು ಸಾಕಾರಗೊಳ್ಳುತ್ತಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಮುಂದಾಳತ್ವದಲ್ಲಿ, ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಾಣವಾಗಿದೆ. ಗುಡಿಸಲಿನಲ್ಲಿ ವಾಸವಿದ್ದರೂ ಈ ಮನೆಯ ಪ್ರತಿಭಾವಂತ ಹುಡುಗನ ಶೈಕ್ಷಣಿಕ ಸಾಧನೆ ಮನೆ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ. ಪಂಜಿಕಲ್ಲು ಗ್ರಾಮದ ಸೋಮಶೇಖರ್ ಹಾಗೂ ಸುಶೀಲಾ ದಂಪತಿ ಕುಂಜರಬೆಟ್ಟು ಎಂಬಲ್ಲಿ ಸ್ವಂತ ಮನೆಯಲ್ಲಿ ವಾಸಗಿದ್ದರು. 10 ವರ್ಷಗಳ ಹಿಂದೆ ಈ ಹಳೆಯ ಮನೆ ಜೀರ್ಣಾವಸ್ಥೆಗೆ ತಲುಪಿ ಕುಸಿದು ಬಿದ್ದಿತ್ತು. ಬಡತನದಲ್ಲಿ ಜೀವನ ನಡೆಸುತ್ತಿದ್ದ ಇವರಿಗೆ ಹೊಸ ಮನೆ ನಿರ್ಮಿಸಲು ಸಾಧ್ಯವಾಗದೆ ಇದರ ಪಕ್ಕದಲ್ಲೇ ಪಾಳುಬಿದ್ದಿದ್ದ ಬೇರೊಬ್ಬರ ಹಂದಿ ಸಾಕಣೆಯ ಗೂಡಿಗೆ ಸಿಮೆಂಟ್ ಶೀಟು ಇಟ್ಟು, ಟಾರ್ಪಾಲು ಹಾಸಿ ಗುಡಿಸಲು ನಿರ್ಮಿಸಿ ವಾಸವಿದ್ದರು. ಈ ದಂಪತಿಗೆ ಮೂವರು ಮಕ್ಕಳು. ಓರ್ವ ಪುತ್ರ ಇವರ ಜತೆಗಿದ್ದು ಇಬ್ಬರು ಮಕ್ಕಳು ಸುಶೀಲಾ ಅವರ ತಾಯಿ ಮನೆಯಲ್ಲಿ ವಾಸವಿದ್ದಾರೆ. ಈ ಗುಡಿಸಲಿನಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲದೆ ಕಷ್ಟದ ಜೀವನ ನಡೆಸುತ್ತಿದ್ದರು. ಕನಸು ಸಾಕಾರಗೊಂಡಿದ್ದು ಹೀಗೆ ಸೋಮಶೇಖರ್ ಹಾಗೂ ಸುಶೀಲಾ ದಂಪತಿಯ ದ್ವಿತೀಯ ಪುತ್ರ ಗಣೇಶ್ ಪ್ರತಿಭಾವಂತ. 3 ವರ್ಷದ ಹಿಂದೆ ಈತ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 550 ಅಂಕಗಳನ್ನು ದಾಖಲಿಸಿದ್ದ. ಶಾಲೆಯ ಐದು ಮಂದಿ ಸಾಧಕರ ಅಭಿನಂದನಾ ಫ್ಲೆಕ್ಸ್‌ನಲ್ಲಿ ಗಣೇಶ್‌ನ ಭಾವಚಿತ್ರವೂ ಅಚ್ಚಾಗಿತ್ತು. ಇದನ್ನು ಅಂದು ಗಮನಿಸಿದ್ದ ದೇವಪ್ಪ ಕುಲಾಲ್ ಈ ಬಾಲಕನನ್ನು ಅಭಿನಂದಿಸಲು ಮನೆ ಹುಡುಕಿಕೊಂಡು ಹೋದಾಗ ಅವರಿಗೆ ಅಚ್ಚರಿ ಕಾದಿತ್ತು. ವಿದ್ಯುತ್ ಬೆಳಕೇ ಇಲ್ಲದ ಗುಡಿಸಲಿನಲ್ಲಿ ವಾಸವಿದ್ದರೂ ಬಡತನವನ್ನು ಮೀರಿ ಸಾಧನೆ ಮಾಡಿದ್ದ ಬಾಲಕನ ಬಗ್ಗೆ ಅವರಿಗೆ ಹೆಮ್ಮೆಯೆನಿಸಿತು. ಈ ಬಡ ಕುಟುಂಬಕ್ಕೆ ತಕ್ಕಮಟ್ಟಿನ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಿಸಿಕೊಡಬೇಕೆಂದುಕೊಂಡರು. ಆ ಪ್ರಯತ್ನದ ಫಲವೇ ಇದೀಗ 3.8 ಲಕ್ಷ ರೂ. ವೆಚ್ಚದ ಮೂಲಸೌಕರ್ಯವಿರುವ ಸುಸಜ್ಜಿತ ಮನೆ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಜಿ ಸಚಿವ ಬಿ.ರಮಾನಾಥ ರೈ, ಲಯನ್ಸ್ ಕ್ಲಬ್ ಬಂಟ್ವಾಳ ಸೇರಿದಂತೆ ದಾನಿಗಳು ಮನೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಉಳಿದ ಮೊತ್ತವನ್ನು ದೇವಪ್ಪ ಕುಲಾಲ್ ಭರಿಸಿದ್ದಾರೆ. ಇದೀಗ ವಿದ್ಯುತ್ ವ್ಯವಸ್ಥೆಯೂ ಮಾಡಲಾಗಿದೆ. ಮೇನಲ್ಲಿ ಮನೆಯ ಗೃಹಪ್ರವೇಶ ನಡೆಯಲಿದೆ.

ಬಾಲಕನ ಎಸ್‌ಎಸ್‌ಎಲ್‌ಸಿ ಸಾಧನೆ ಗಮನಿಸಿ ಅವರ ಮನೆಗೆ ಭೇಟಿ ನೀಡಿದಾಗ ಅವರ ಮನೆಯ ಸ್ಥಿತಿಗತಿ ಅರಿವಿಗೆ ಬಂದು ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಿತ ದಾನಿಗಳು ಸಹಕರಿಸಿದ್ದಾರೆ. ಬಡತನದಲ್ಲೂ ಗಣೇಶ್ ಶೈಕ್ಷಣಿಕ ಸಾಧನೆ ಮನೆ ನಿರ್ಮಾಣಕ್ಕೆ ಪ್ರೇರಣೆಯಾಗಿದೆ. ದೇವಪ್ಪ ಕುಲಾಲ್ ಪಂಜಿಕಲ್ಲು, ಮನೆ ನಿರ್ಮಾಣದ ರೂವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net