

ವಿಜಯವಾಣಿ ಸುದ್ದಿಜಾಲ ಮಂಗಳೂರು
ಶಿಕ್ಷಕರಿಲ್ಲದ, ಸರಿಯಾಗಿ ಪಠ್ಯ ಪುಸ್ತಕಗಳೇ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದುವ ನಮ್ಮ ನಗರಗಳಲ್ಲಿ ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ ಬಡ ಪೌರ ಕಾರ್ಮಿಕರ ಮಕ್ಕಳು, ರಸ್ತೆ ಬದಿಗಳಲ್ಲಿ ಬೂಟ್ ಪಾಲಿಶ್ ಮಾಡುವವರ ಮಕ್ಕಳು ಮತ್ತು ಎಲ್ಲ ಸೌಲಭ್ಯ - ಸೌಕರ್ಯಗಳೊಂದಿಗೆ ಮೊಂಟೆಸ್ಸೋರಿ, ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳಲ್ಲಿ ಓದುವ ಮತ್ತು ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಮಂತ್ರಿಗಳ ಮಕ್ಕಳು, ಅವರೆಲ್ಲರ ಜಾತಿ ಒಂದೇ ಎಂಬ ಕಾರಣಕ್ಕಾಗಿ, ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಸರ್ಕಾರಿ ನೌಕರಿ ಪಡೆಯಲು ಒಂದೇ ಕೋಟಾದಡಿಯಲ್ಲಿ ಸ್ಪರ್ಧೆ ಎದುರಿಸಬೇಕು ಎಂಬ ಚಿಂತನೆ ಮತ್ತು ಅಂತಹ ನೀತಿ ಮೂಲತಃ ಅತ್ಯಂತ ಅಮಾನವೀಯ ಎಂದು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅಭಿಪ್ರಾಯಪಟ್ಟಿದ್ದಾರೆ.
’ರಾಜ್ಯದ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ’ ಕುರಿತು ನಗರದ ಹೊಟೇಲ್ ಶ್ರೀನಿವಾಸ್‌ನಲ್ಲಿ ಆಯೋಜಿಸಿದ ದಲಿತ ಸಂಘಟನೆ ಪ್ರತಿನಿಧಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಆದ್ದರಿಂದ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿರುವ ಈ ಸಂದರ್ಭದಲ್ಲಿ, ಈ ಅಮಾನವೀಯ ಮೀಸಲಾತಿ ನೀತಿಯನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ ಅಥವಾ ತಿರಸ್ಕರಿಸಿ, ಈ ಶೋಷಿತ ಜಾತಿಗಲ್ಲಿರುವ ಅತ್ಯಂತ ದುರ್ಬಲರೂ ಅಸಹಾಯಕರೂ ಆಗಿರುವ ಶ್ರಮಜೀವಿಗಳ ವರ್ಗಗಳಿಗೆ ವಿಶೇಷ ಆದ್ಯತೆ ಮತ್ತು ಸಂರಕ್ಷಣೆ ನೀಡುವ ವಿನೂತನ ಮೀಸಲಾತಿ ನೀತಿಯನ್ನು ರೂಪಿಸಬೇಕು ಎಂದು ಅವರು ಹೇಳಿದರು.
ಆಳುವ ವರ್ಗಗಳು ಸಿದ್ಧ ಪಡಿಸುವ ನೀತಿಗೆ ಪರ್ಯಾಯವಾಗಿ, ತಾವು ಸಿದ್ಧ ಪಡಿಸಿದ ಒಳಮೀಸಲಾತಿ ನೀತಿ ಮತ್ತು ಅದರ ಪರಿಣಾಮ ಕಾರಿ ಅನುಷ್ಠಾನ ಹೇಗೆ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳಲ್ಲಿರುವ ವಿವಿಧ ವರ್ಗಗಳ ಜನರ ಸಂರಕ್ಷಣೆ ಹೇಗೆ ಖಾತರಿ ಮಾಡ ಬಹುದು ಎಂಬುದನ್ನು ಅವರು 100 ಪಾಯಿಂಟ್ ರೋಸ್ಟರ್ ಮೂಲಕ ವಿವರಿಸಿದರು.
ಈ ವೈಜ್ಞಾನಿಕ, ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಈ ವಿನೂತನ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜ ನಮಗೆ ನೆರವು ನೀಡಬೇಕು ಎಂದು ಮನವಿ ಮಾಡಿದ ಅವರು, ಈ ಬಗ್ಗೆ ಶೀಘ್ರದಲ್ಲಿ ಮಹಾಒಕ್ಕೂಟದ ನಿಯೋಗ ನಮ್ಮ ಜನಪ್ರತಿನಿದಿನಗಳನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತವಾಗಿರುವ ’ಆದಿ ಆಂಧ್ರ’, ’ಆದಿ ದ್ರಾವಿಡ’ ಮತ್ತು ’ಆದಿ ಕರ್ನಾಟಕ’ ಎಂಬ ಹೆಸರಿನ ಜಾತಿಗಳನ್ನು ’ಅವುಗಳು ಜಾತಿಗಳಲ್ಲ, ಜಾತಿಗಳ ಗುಂಪುಗಳು. ಆದ್ದರಿಂದ ಈ ಗುಂಪುಗಳಿಗೆ ಸೇರಿದವರು ಸಮೀಕ್ಷೆಯಲ್ಲಿ ತಮ್ಮ ಉಪ ಜಾತಿಗಳನ್ನು ದಾಖಲಿಸ ಬೇಕು’ ಎಂದು ಹೇಳುತ್ತಾ ಸರ್ಕಾರದ ಓರ್ವ ಸಚಿವರು ಮತ್ತು ಸ್ವತಃ ನ್ಯಾ. ನಾಗಮೋಹನ್ ದಾಸ್ ಅವರು ಪರಿಶಿಷ್ಟ ಸಮುದಾಯಗಳಲ್ಲಿ ಅನಗತ್ಯ ಗೊಂದಲಗಳನ್ನು ಮೂಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕರ್ನಾಟಕ ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ, ಅದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ಜಾತಿಗಳು ಸೇರಿ, 89 ಅತ್ಯಂತ ದುರ್ಬಲ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿ ಗೊಳಿಸಿ, ಈ ಬಗ್ಗೆ ಸಂವಿಧಾಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಬಸವರಾಜ ಬೊಮ್ಮಯಿ ನೇತೃತ್ವದ ರಾಜ್ಯ ಸರಕಾರ ದಿ. 27.03.2023 ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ನಮ್ಮ ಮಹಾಒಕ್ಕೂಟ ಇದನ್ನು ಆಗಲೇ ತೀವ್ರವಾಗಿ ವಿರೋಧಿಸಿತ್ತು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ರೆನ್ನಿ ಡಿ’ ಸೋಜ, ನಿವೃತ್ತ ಪೌರ ಕಾರ್ಮಿಕೆ ಪೂವಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ ಎ ಎಂ ಹನೀಫ್, ಸುಳ್ಯ ತಾಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಹಿರಿಯ ಪತ್ರಕರ್ತರಾದ ಎಸ್. ಜಯರಾಮ್ ಮತ್ತು ರಮೇಶ್ ಪೆರ್ಲ, ಮಾಜಿ ಕರ್ಪೂರೇಟರ್ ಪ್ರೇಮ್ ಬಲ್ಲಾಳ್ ಭಾಗ್, ಡಿಎಸ್‌ಎಸ್ ಸಂಚಾಲಕ ಗಿರೀಶ್ ಉಳ್ಳಾಲ್, ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಉಪಾಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ, ಸೀತಾರಾಮ್ ಕೊಂಚಾಡಿ, ಉಪ ಕಾರ್ಯದರ್ಶಿ ಪದ್ಮನಾಭ ಮೂಡಬಿದರೆ, ಪ್ರೊ.ಐಡಾ ಡಿ ಸೋಜ, ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಅನಿಲ್ ಕಂಕನಾಡಿ, ವಿ ವಿ ಯ ಶಿಕ್ಷಕ ಡಾ.ಅನಿಲ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.