

ಬೆಂಗಳೂರು: ‘ನಾವೇನೋ ಮನೆಯವರಿಗೆ ಖುಷಿಯಿಂದ ಸೀರೆ ಖರೀದಿ ಮಾಡಿದ್ದೇವೆ. ಆದರೆ ಸೀರೆ ನೋಡಿ ಮನೆಯಲ್ಲಿ ಹೆಂಡತಿ ಬೈಯ್ಯದಿದ್ದರೆ ಸಾಕು’. - ಸಿಎಂ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿಗೆ ಅಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕರು.
ಗಾಂಧಿ ಜಯಂತಿ ಅಂಗವಾಗಿ ಖಾದಿ ಉತ್ಪನ್ನಗಳ ಖರೀದಿ ಬಗ್ಗೆ ಜನರಿಗೆ ಮೇಲ್ಪಂಕ್ತಿ ಹಾಕುವ ಸಲುವಾಗಿ ಬೊಮ್ಮಾಯಿ, ಸಚಿವರಾದ ಎಂ.ಟಿ.ಬಿ.ನಾಗರಾಜು, ಗೋವಿಂದ ಕಾರಜೋಳ, ಸುನೀಲ್ಕುಮಾರ್ ಜತೆ ಗಾಂಧೀ ಭವನ ಬಳಿಯ ಖಾದಿ ಭಂಡಾರಕ್ಕೆ ಭೇಟಿದರು. ಇಡೀ ಖಾದಿ ಭಂಡಾರವನ್ನು ಒಮ್ಮೆ ಸುತ್ತು ಹಾಕಿದ ಸಿಎಂ, ಮೊದಲ ಮಹಡಿಯ ರೇಷ್ಮೆ ವಿಭಾಗವನ್ನು ವೀಕ್ಷಿಸಿದರು. ನಂತರ ತಮ್ಮ ಪತ್ನಿ ಚನ್ನಮ್ಮಗಾಗಿ ಸೀರೆಗಳನ್ನು ನೋಡಿದರು. 3-4 ನೋಡಿದ ನಂತರ ಹಸಿರು ಬಣ್ಣದ ಸೀರೆಯೊಂದನ್ನು ಖರೀದಿಸಿದರು. ಆಗ ಜತೆಯಲ್ಲಿದ್ದ ಗೋವಿಂದ ಕಾರಜೋಳ ಉದ್ದೇಶಿಸಿ, ‘ಕಾರಜೋಳ ಸಾಹೇಬರೇ ನೀವು ಸೀರೆ ಖರೀದಿ ಮಾಡಿ’ ಎಂದು ಆಹ್ವಾನಿಸಿದರು. ಅದಕ್ಕೆ ಕಾರಜೋಳ ‘ಇಲ್ಲ ಸೀರೆ ಎಲ್ಲ ನಮಗೆ ಗೊತ್ತಾಗಲ್ಲ’ ಎಂದು ಉತ್ತರಿಸಿದರು. ‘ದುಡ್ಡು ಕೊಟ್ಟು ಖರೀದಿ ಮಾಡಿ ಮನೆಗೆ ಹೋಗಿ ಬೈಯ್ಯಿಸಿಕೊಳ್ಳುವುದು’ ಎಂದು ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು.
ಅದೇ ವೇಳೆಗೆ ಬಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ‘ಏನು ಸೀರೆ ಖರೀದಿ ಜೋರಾ’ ಎಂದು ನಗುತ್ತ ಕೇಳಿದರು. ‘ಬನ್ನಿ ನೀವು ಖರೀದಿಸಿ’ ಎಂದು ಸಿಎಂ ಒತ್ತಾಯಿಸಿದರು. ಎಲ್ಲರೂ ತಮ್ಮ ಪತ್ನಿಯರಿಗೆ ಸೀರೆ, ತಮಗೆ ಜುಬ್ಬದ ಬಟ್ಟೆ ಕೊಂಡರು. ಸಿಎಂ ಖರೀದಿ ಮಾಡಿದ ವಸ್ತ್ರಗಳ ಮೊತ್ತವೇ ಸುಮಾರು 16 ಸಾವಿರ ರೂ. ಆಯಿತು. ಬಿಲ್ ಪಾವತಿಸಿ, ಹೊರ ಬರುವಾಗಲೂ ‘ದುಡ್ಡು ಕೊಟ್ಟು ಖರೀದಿಸುತ್ತೇವೆ, ಡಿಸೈನ್, ಕಲರ್ ಬಗ್ಗೆ ಮನೆಯವರು ಬೈಯ್ಯದಿದ್ದರೆ ಸಾಕು’ ಎಂದು ಬೊಮ್ಮಾಯಿ ನಗುತ್ತ ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ಎಲ್ಲ ಶಾಸಕರು, ಸಚಿವರು, ಅಧಿಕಾರಿಗಳು ಖಾದಿ ಖರೀದಿಸುವಂತೆ ಎಂ.ಟಿ.ಬಿ.ನಾಗರಾಜ್, ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದರು. ಅದರಿಂದ ಖಾದಿ ಭಂಡಾರಕ್ಕೆ ಭೇಟಿ ನೀಡಿದ್ದರು. ಗಾಂಧಿ ಭವನ ಬಳಿಯ ಖಾದಿ ಭಂಡಾರವನ್ನು 1984ರ ನ.15ರಂದು ಅಂದಿನ ಸಚಿವರಾಗಿದ್ದ ಎಸ್.ಆರ್.ಬೊಮ್ಮಾಯಿ ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.