

Sonam Raghuvanshi: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್ ಎದುರಾಗುತ್ತಿವೆ. ಎ1 ಆರೋಪಿ ಸೋನಮ್ ಬಗ್ಗೆ ಪ್ರತಿದಿನ ಆಘಾತಕಾರಿ ಸುದ್ದಿಗಳು ಹೊರಬೀಳುತ್ತಲೇ ಇವೆ. ತನ್ನ ಪ್ರಿಯಕರನ ಜೊತೆ ಸರಸ-ಸಲ್ಲಾಪದಲ್ಲಿರಲು ಮೂವರು ಸುಪಾರಿ ಹಂತಕರನ್ನು ನೇಮಿಸಿ ತನ್ನ ಗಂಡ ರಾಜಾ ರಘುವಂಶಿಯನ್ನು ಬರ್ಬರವಾಗಿ ಹತ್ಯೆಗೈದ ಈಕೆಯ ಜಾಲ ದೊಡ್ಡದ್ದೇ ಇದೆ.
'ಬಾ ನಲ್ಲ ಮಧುಚಂದ್ರಕೆ' ಎಂಬ ನೆಪದಲ್ಲಿ ಗಂಡನನ್ನು ಕರೆದೊಯ್ದು ಕೊಲೆ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಈ ಪ್ರಕರಣದ ತನಿಖೆಯ ಸಮಯದಲ್ಲಿ ಕಿರಾತಕಿ ಸೋನಮ್ ಬಿಚ್ಚಿಟ್ಟ ಆಘಾತಕಾರಿ ವಿಷಯಗಳು ಸದ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಮೊದಲಿಗೆ ತಾನು ಪ್ರಿಯಕರ ರಾಜ್ ಕುಶ್ವಾಹನಿಗೋಸ್ಕರ ಗಂಡನನ್ನು ಕೊಲೆ ಮಾಡಿಲ್ಲ ಎಂದ ಈಕೆಯ ನಡೆ ಪೊಲೀಸರ ಅನುಮಾನ, ಗೊಂದಲಕ್ಕೆ ಕಾರಣವಾಯಿತು. ಆ ನಂತರ ಮುಂದುವರಿದ ತನಿಖೆಯಲ್ಲಿ ರಾಜಾ ರಘುವಂಶಿಯನ್ನು ಹತ್ಯೆಗೈಲು ಅದು ಆಕೆಯ ನಾಲ್ಕನೇ ಪ್ರಯತ್ನ ಎಂಬುದು ತಿಳಿದುಬಂದಿದೆ.
ಸೋನಮ್ ಮತ್ತು ಇತರ ಆರೋಪಿಗಳು ರಾಜಾನನ್ನು ಹತ್ಯೆಗೈಯಲು ಮೂರು ಬಾರಿ ಯತ್ನಿಸಿದ್ದರು. ಆದರೆ, ಅದ್ಯಾವುದು ಅಂದಕೊಂಡಂತೆ ಈಡೇರಲಿಲ್ಲ. ಕಾರಣ, ದೇಹವನ್ನು ಬಿಸಾಡಲು ಸರಿಯಾದ ಸ್ಥಳ ಅವರ ಸಂಚಿಗೆ ತಕ್ಕಂತೆ ಸಿಕ್ಕಿರಲಿಲ್ಲ. ಇದಾದ ನಂತರ ಇನ್ನೆರೆಡು ಕಡೆ ಕೊಲೆಗೈಯಲು ಮುಂದಾದರು. ಅಲ್ಲಿಯೂ ಜನರು ಮತ್ತು ಬೇರೆ ಬೇರೆ ಅಡೆತಡೆಗಳು ಎದುರಾದ ಹಿನ್ನಲೆ ಮರ್ಡರ್ ಪ್ಲ್ಯಾನ್ ವಿಫಲವಾಯಿತು. ಕೊನೆಗೆ ನಾಲ್ಕನೇ ಯತ್ನದಲ್ಲಿ ಹರಿಯುವ ಝರಿ ಬಳಿ ರಾಜಾ ರಘುವಂಶಿಯನ್ನು ಇರಿದು ಕೊಂದ ಪಾಪಿಗಳು, ದೇಹವನ್ನು ಎಸೆದು ಪರಾರಿಯಾದರು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ವಿವರಿಸಿದ್ದಾರೆ.
ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಗಿದೆ. ಕೊಲೆ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿದೆ,(ಏಜೆನ್ಸೀಸ್).