ಕಹಿಯಾದ ಜೇನು ಕೃಷಿ: ಬದಲಾದ ಕೃಷಿ ಪದ್ಧತಿ ಕಾರಣ, ಹೊರ ರಾಜ್ಯದಿಂದ ಆಮದು

Honey
Published on

ಮಲೆನಾಡಿನ ಜೇನಿಗೆ ಸಾಕಷ್ಟು ಬೇಡಿಕೆ ಇದ್ದು, ಜೇನು ಸಹಕಾರ ಸಂಘ ವಾರ್ಷಿಕವಾಗಿ 3 ಕೋಟಿ ರೂ., ಗೂ ಅಧಿಕ ವಹಿವಾಟು ನಡೆಸುತ್ತಿದೆ. ಸ್ಥಳೀಯವಾಗಿ ಬೇಡಿಕೆಗೆ ತಕ್ಕಂತೆ ಜೇನು ಉತ್ಪಾದನೆಯಾಗದ ಕಾರಣ ಬಿಹಾರ, ಜಾರ್ಖಂಡ್ ಹಾಗೂ ರಾಜ್ಯದ ವಿವಿಧೆಡೆಯಿಂದ ಜೇನು ತರಿಸಿ ಮಾರಲಾಗುತ್ತಿದೆ.

| ಕಾಂತರಾಜ್ ಹೊನ್ನೇಕೋಡಿ ಸಕಲೇಶಪುರ

ಮಲೆನಾಡಿನಲ್ಲಿ ಜೇನುಕೃಷಿ ಅವನತಿಗೆ ಬದಲಾದ ಕೃಷಿ ಪದ್ಧತಿ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. 90ರ ದಶಕದ ನಂತರ ಕಾಫಿ ಬೆಳೆ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಬಳಿಕ ಹಾಗೂ 2000-01ರ ವೇಳೆಗೆ ಕಾಳುಮೆಣಸಿನ ಧಾರಣೆ ವಿಪರೀತ ಏರಿಕೆ ಕಂಡ ಪರಿಣಾಮ ಬಹುತೇಕ ಕಾಫಿ ಹಾಗೂ ಮೆಣಸಿನ ಬಳ್ಳಿ ಬೆಳೆಯುವ ವಿಧಾನ ಸಾಂಪ್ರದಾಯಿಕತೆಯಿಂದ ಬದಲಾವಣೆಗೊಂಡು ಆಧುನಿಕತೆ ಪಡೆಯಿತು. ಹೆಚ್ಚು ಫಸಲು ಉತ್ಪಾದನೆ ಸ್ಪರ್ಧೆಗೆ ಬಿದ್ದಿರುವ ಬೆಳೆಗಾರರು ವಾರ್ಷಿಕವಾಗಿ ಕಾಫಿಗೆ ಎರಡರಿಂದ ಮೂರು ಬಾರಿ ಹಾಗೂ ಮೆಣಸಿನ ಬಳ್ಳಿಗಳಿಗೆ ನಾಲ್ಕರಿಂದ ಐದು ಬಾರಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಇದು ಜೇನುಹುಳುಗಳಿಗೆ ಕಂಟಕವಾಗಿ ಪರಿಣಮಿಸಿದೆ. ಪರಿಣಾಮ, ಭಾರಿ ಪ್ರಮಾಣದಲ್ಲಿ ಜೇನುಕೃಷಿ ಮೂರು ಜಿಲ್ಲೆಗಳ ಲ್ಲಿ ಬಹುತೇಕ ನೆಲಕಚ್ಚಿದೆ.

ಹೊರರಾಜ್ಯದಿಂದ ಆಮದು: ಮಲೆನಾಡಿನ ಜೇನು ಪರಿಶುದ್ಧ ಎಂಬ ನಂಬಿಕೆ ರಾಜ್ಯದ ಜನರಲ್ಲಿರುವುದರಿಂದ ಸಾಕಷ್ಟು ಬೇಡಿಕೆ ಇದ್ದು, ಜೇನು ಸಹಕಾರ ಸಂಘ ವಾರ್ಷಿಕವಾಗಿ 3 ಕೋಟಿ ರೂ., ಗೂ ಅಧಿಕ ವಹಿವಾಟು ನಡೆಸುತ್ತಿದೆ. ಆದರೆ, ಸ್ಥಳೀಯವಾಗಿ ಜೇನು ಉತ್ಪಾದನೆಯಾಗದ ಕಾರಣ ಬಿಹಾರ, ಜಾರ್ಖಂಡ್ ಹಾಗೂ ರಾಜ್ಯದ ವಿವಿಧೆಡೆಯಿಂದ ಜೇನು ತರಿಸಿ ಮಾರಲಾಗುತ್ತಿದೆ.

ಉತ್ತರ ಭಾರತದಲ್ಲಿ ಉದ್ಯಮ: ಉತ್ತರ ಭಾರತದಲ್ಲಿ ಜೇನು ಕೃಷಿ ಉದ್ಯಮದ ರೂಪ ಪಡೆದಿದೆ. ವಾರ್ಷಿಕ ಮೂರರಿಂದ ನಾಲ್ಕು ಬಾರಿ ಜೇನು ಕೊಯ್ಲು ನಡೆಸುವ ಪ್ರತಿ ಕುಟುಂಬ ಕನಿಷ್ಠ 100 ರಿಂದ 1 ಸಾವಿರ ಜೇನುಪೆಟ್ಟಿಗೆಗಳ ಮೂಲಕ ಜೇನು ಉತ್ಪಾದಿಸುತ್ತಿದೆ. ಅಲ್ಲಿನ ಜೇನು ಕೃಷಿಕರು ಇಟಲಿಯಿಂದ ಆಮದು ಮಾಡಿಕೊಂಡಿರುವ ಮೇಲ್ಲಿಪ್ಯಾರ ಎಂಬ ಜೇನಿನ ಹುಳುಗಳಿಂದ ಜೇನು ಉತ್ಪಾದಿಸುತ್ತಿದ್ದಾರೆ. ಮಲೆನಾಡಿನ ಜೇನು ಹುಳುಗಳಿಗೆ ಹೋಲಿಸಿದಲ್ಲಿ ದೊಡ್ಡ ಗಾತ್ರದಲ್ಲಿರುವ ಈ ತಳಿಯ ಜೇನುಹುಳುಗಳು ಪ್ರತಿ ಗೂಡಿನಲ್ಲಿ ಕನಿಷ್ಠ 40 ರಿಂದ 50 ಸಾವಿರ ಸಂಖ್ಯೆಯಲ್ಲಿವೆ. ಕನಿಷ್ಠ ಈ ಗೂಡಿನಿಂದ ಪ್ರತಿ ಕೊಯ್ಲಿಗೆ 10 ರಿಂದ 30 ಕೆಜಿ ಜೇನು ಉತ್ಪಾದನೆಯಾಗುತ್ತದೆ. ಆದರೆ, ಮಲೆನಾಡಿನಲ್ಲಿ ಸರೇನಾ ಇಂಡಿಕಾ ಎಂಬ ದೇಸಿ ತಳಿಯ ಜೇನುಹುಳುಗಳಿದ್ದು, ಈ ಜೇನುಗೂಡಿನಲ್ಲಿ 7 ರಿಂದ 10 ಸಾವಿರ ಹುಳುಗಳಿರುತ್ತವೆ. ಪ್ರತಿ ಕೊಯ್ಲಿಗೆ 1 ರಿಂದ 4 ಕೆಜಿ ಜೇನು ಉತ್ಪಾದನೆಯಾಗುತ್ತದೆ. ದೇಸಿ ತಳಿಯ ಜೇನುಹುಳಗಳ ಉತ್ಪಾದನೆ ಸಾಮರ್ಥ್ಯ ಕಡಿಮೆ ಇರುವುದು ಸಹ ಜೇನು ಕೃಷಿಕರ ನಿರಾಸಕ್ತಿಗೆ ಕಾರಣ ಎನ್ನಲಾಗುತ್ತಿದೆ.

ಕಲುಷಿತ ದಂಧೆ: ಮಲೆನಾಡಿಗೆ ಬರುವ ಪ್ರವಾಸಿಗರು ಸಾಮಾನ್ಯವಾಗಿ ಜೇನು ಖರೀದಿಸುವುದು ವಾಡಿಕೆ. ಇವರಿಗೆ ಬೀದಿ ಬದಿ ಹಾಗೂ ಬಹುತೇಕ ಅಂಗಡಿ ಮಾಲೀಕರು ಪರಿಶುದ್ಧ ಜೇನು ಎಂದು ಹೇಳಿ ಸಕ್ಕರೆ ನೀರು ಮಿಶ್ರಿತ ಜೇನು ಹಾಗೂ ಸಕ್ಕರೆ ಪಾಕವನ್ನೇ ಜೇನು ಎಂದು ನಂಬಿಸಿ ಮಾರಿ ವಂಚಿಸುತ್ತಿದ್ದಾರೆ. ಕೆಲವು ಬುಡಕಟ್ಟು ಜನಾಂಗದ ಜನರು ಜೇನಿನ ಅರಿಗಳಿಗೆ ಸಕ್ಕರೆ ಪಾಕ ಹಾಕಿ ಶುದ್ಧ ಜೇನು ಎಂದು ಮಾರಾಟ ಮಾಡುತ್ತಿದ್ದು ಈ ದಂಧೆ ಇದೀಗ ವ್ಯಾಪಕವಾಗಿದೆ.

ಮಲೆನಾಡಿನಲ್ಲಿ ಕಂಡುಬರುವ ಬಗೆ: ಹೆಜ್ಜೇನು, ಕೋಲುಜೇನು, ಹುತ್ತದ ಜೇನು, ತಡುವೆ ಜೇನು, ಮಿಷರಿ ಕುರುಡ ಜೇನುಗಳು ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮಿಷರಿ ಕುರುಡ ಜೇನನ್ನು ವಾರ್ಷಿಕವಾಗಿ ಒಮ್ಮೆ ಕೊಯ್ಲು ನಡೆಸಲಾಗುತ್ತಿದ್ದು, ಪ್ರತಿ ಕೆಜಿಗೆ 3 ರಿಂದ 4 ಸಾವಿರ ರೂ. ವರೆಗೆ ಧಾರಣೆ ಇದೆ. ಆದರೆ, ಉಳಿದೆಲ್ಲ ಜೇನಿನ ಬೆಲೆ 200-400 ರೂ. ಇದೆ.

ಜೇನು ಕೃಷಿ ಹೆಚ್ಚಿನ ಲಾಭದಾಯಕ ಉದ್ಯಮವಾಗಿದೆ. ಇದಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿದಲ್ಲಿ ಸಕ್ಕರೆ ಬದಲಿಗೆ ಜೇನನ್ನು ಮನೆಯಲ್ಲಿ ಬಳಸುವಂತೆ ಮನವೊಲಿಸಬಹುದು. ಸಂಘದ ಮೂಲಕ ಸ್ಥಳೀಯವಾಗಿ ಜೇನು ಉತ್ಪಾದನೆಗೆ ರಿಯಾಯಿತಿ ಮೂಲಕ ಹಲವು ಸೌಲಭ್ಯ ಕಲ್ಪಿಸುತ್ತಿದ್ದೇವೆ. | ಜೈ ಮಾರುತಿ ದೇವರಾಜ್, ಅಧ್ಯಕ್ಷ, ಜೇನು ಮಾರಾಟ ಸಹಕಾರ ಸಂಘ, ಸಕಲೇಶಪುರ ಇತ್ತೀಚಿನ ವರ್ಷಗಳಲ್ಲಿ ಜೇನು ಕೃಷಿ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರ ಮಲೆನಾಡಿನಲ್ಲಿ ಜೇನು ಕೃಷಿ ಉತ್ತೇಜನಕ್ಕೆ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. | ಸತೀಶ್, ಸಿಇಒ, ಜೇನು ಮಾರಾಟ ಸಹಕಾರ ಸಂಘ, ಸಕಲೇಶಪುರ

ಸಹಕಾರ ಸಂಘ ಸ್ಥಾಪನೆ: 1930-40ರ ದಶಕದಲ್ಲಿ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದ ಜೇನಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 1940ರಲ್ಲಿ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಸಕಲೇಶಪುರ ಪಟ್ಟಣದಲ್ಲಿ ಜೇನು ಮಾರುಕಟ್ಟೆ ಸಹಕಾರ ಸಂಘ ಸ್ಥಾಪಿಸಲಾಗಿತ್ತು. ಆ ಮೂಲಕ ಸ್ಥಳೀಯ ಉತ್ಪಾದಕರಿಂದ ಜೇನು ಖರೀದಿಸಿ ರಾಜ್ಯದ ವಿವಿಧೆಡೆ ಸೇರಿ ಅಂತಾರಾಜ್ಯಗಳಿಗೂ ಪೂರೈಸಲಾಗುತ್ತಿತ್ತು. ಇದರೊಂದಿಗೆ, ಜೇನು ಕೃಷಿ ಅಭಿವೃದ್ಧಿಗೆ ಅಗತ್ಯವಿದ್ದ ತರಬೇತಿ, ಪ್ರಾತ್ಯಕ್ಷಿಕೆ, ಸಾಲ ಸೌಲಭ್ಯ, ಜೇನುಪೆಟ್ಟಿಗೆ ಒದಗಿಸುವ ಕೆಲಸ ಮಾಡಲಾಗುತ್ತಿತ್ತು. ಹೀಗಾಗಿ, ಕರ್ನಾಟಕದಲ್ಲಿ ಮಲೆನಾಡು ಜೇನಿನ ತವರು ಎಂದೇ ಕರೆಸಿಕೊಳ್ಳುತ್ತಿತ್ತು. ಈ ಮಾತು 90ರ ದಶಕದವರೆಗೂ ಮುಂದುವರಿದಿತ್ತು. ಆದರೆ, ನಂತರದ ವರ್ಷಗಳಲ್ಲಿ ಜೇನು ಕೃಷಿಗೆ ಎಷ್ಟೇ ಉತ್ತೇಜನ ನೀಡಿದರೂ ಸ್ಥಳೀಯವಾಗಿ ಜೇನು ಉತ್ಪಾದನೆ ಕಡಿಮೆಯಾಗಿದೆ. ಪರಿಣಾಮ, ಮಾರುಕಟ್ಟೆಗೆ ಸ್ಥಳೀಯ ಜೇನು ಪೂರೈಕೆಯಾಗದೆ ಉತ್ತರ ಭಾರತದಿಂದ ಜೇನು ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಜೇನು ಮಾರಾಟ ಸಹಕಾರ ಸಂಘ ಮಾಡುತ್ತಿದೆ.

ಆಸಕ್ತಿ ಹೆಚ್ಚುತ್ತಿದೆ: ಕಳೆದ ಎರಡು ದಶಕದಿಂದ ಬಹುತೇಕ ಜೇನು ಕೃಷಿಗೆ ಮಲೆನಾಡಿಗರು ಹಿಂದಿರುಗಿದ್ದಾರೆ. ಯುವ ಹಾಗೂ ಪ್ರಗತಿಪರ ರೈತರು ಜೇನು ಕೃಷಿ ಆರಂಭಿಸಿದ್ದು, ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ.

ಮಾನದಂಡ ಬದಲಾಗಲಿ: ಜೇನು ಕೃಷಿ ಉತ್ತೇಜನಕ್ಕೆ ರಾಜ್ಯ ಸರ್ಕಾರ ‘ಮಧುವನ’ ಯೋಜನೆ ಮೂಲಕ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಜೇನು ಕೃಷಿ ಅಭಿವೃದ್ಧಿ ಹೊಣೆಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿದೆ. ಆದರೆ, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ಯೋಜನೆ ಫಲಪ್ರದವಾಗಿಲ್ಲ. ಜೇನು ಉತ್ಪಾದನೆಗೆ ಹೆಚ್ಚಿನ ಅವಕಾಶವಿರುವ ಕೊಡಗು, ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿ ಸರ್ಕಾರದ ಈ ಯೋಜನೆಯನ್ನು ತೋಟಗಾರಿಕೆ ಇಲಾಖೆ ಬದಲಾಗಿ ಜೇನು ಮಾರಾಟ ಸಹಕಾರ ಸಂಘಕ್ಕೆ ವಹಿಸಿದರೆ ಉತ್ತಮ ಎಂಬ ಅಭಿಪ್ರಾಯ ಜೇನು ಕೃಷಿಕರಿಂದ ಕೇಳಿಬರುತ್ತಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net