ಲಕ್ಷ ರೂ.ಗೆ ರಾಜೀವ್ ಗಾಂಧಿ ವಸತಿಭಾಗ್ಯ; ಸರ್ಕಾರವೇ ಭರಿಸಲಿದೆ ಬಾಕಿ ಮೊತ್ತ

CM Zameer
Published on

ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮನೆಗಳ ಬಳಿಕ ರಾಜೀವ್ ಗಾಂಧಿ ವಸತಿ ನಿಗಮದಡಿ ರಾಜ್ಯದ ವಿವಿಧೆಡೆ ಪ್ರಗತಿಯಲ್ಲಿರುವ 52,189 ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ 2,013 ಕೋಟಿ ರೂ. ಅನುದಾನಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೂಡಲೇ ಸಚಿವ ಸಂಪುಟದ ಮುಂದೆ ಮಂಡಿಸುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ವಸತಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. 52,189 ಮನೆಗಳ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ವಂತಿಗೆ 2,013 ಕೋಟಿ ರೂ. ಪಾವತಿ ಆಗಿಲ್ಲ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಲು 2,168 ಕೋಟಿ ರೂ. ಅಗತ್ಯ ಇದೆ ಎಂದು ಮುಖ್ಯಮಂತ್ರಿ ಗಮನಕ್ಕೆ ಜಮೀರ್ ತಂದರು. ಫಲಾನುಭವಿಗಳ ವಂತಿಗೆ 2,013 ಕೋಟಿ ರೂ. ಬರಬೇಕಿದ್ದು, 134 ಕೋಟಿ ರೂ. ಮಾತ್ರ ಪಾವತಿ ಆಗಿದೆ. ಫಲಾನುಭವಿಗಳು ಬಡವರಾಗಿದ್ದು, 4 ಲಕ್ಷ ರೂ. ಪಾವತಿ ಕಷ್ಟ ಆಗಿದೆ. ಬ್ಯಾಂಕ್​ಗಳಿಂದಲೂ ಸಾಲ ಸಿಗುತ್ತಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡಂತೆ ಫಲಾನುಭವಿಗಳು ಒಂದು ಲಕ್ಷ ರೂ. ಪಾವತಿಸಿ ಉಳಿದ ಹಣ ಸರ್ಕಾರ ಭರಿಸಿದರೆ ಮಾತ್ರ ಯೋಜನೆ ಪೂರ್ಣಗೊಂಡು ಬಡವರಿಗೆ ಮನೆ ನೀಡಲು ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.

ತಕ್ಷಣ 100 ಕೋಟಿ ರೂ. ನೀಡಿದರೆ ಫೆಬ್ರವರಿ ವೇಳೆಗೆ 5 ಸಾವಿರ ಮನೆ ನೀಡಬಹುದು. ಹಂತ ಹಂತವಾಗಿ 1,879 ಕೋಟಿ ರೂ. ಫಲಾನುಭವಿಗಳ ವಂತಿಗೆ ಹಾಗೂ ಮೂಲಸೌಕರ್ಯಕ್ಕೆ 289 ಕೋಟಿ ರೂ. ನೀಡಿದರೆ ಮುಂದಿನ ಡಿಸೆಂಬರ್ ವೇಳೆಗೆ ಎಲ್ಲ ಮನೆಗಳ ಕಾಮಗಾರಿ ಪೂರ್ಣಗೊಳಿಸಿ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅತೀಕ್, ಹಣಕಾಸು ಇಲಾಖೆ ಕಾರ್ಯದರ್ಶಿ ಜಾಫರ್, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಇದ್ದರು.

ಬಿಗ್ ರಿಲೀಫ್: ರಾಜೀವ್ ಗಾಂಧಿ ವಸತಿ ನಿಗಮ ವ್ಯಾಪ್ತಿಯಲ್ಲಿ 2013ರಿಂದ ಬಾಕಿ ಇದ್ದ 52 ಸಾವಿರ ಮನೆ ನಿರ್ಮಾಣ ಕ್ಕೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಪಾವತಿ ಮಾಡಿದಲ್ಲಿ ಫಲಾನುಭವಿಗಳು ಒಂದು ಲಕ್ಷ ರೂ. ಮಾತ್ರ ಪಾವತಿಸಬೇಕಾಗುತ್ತದೆ.

500 ಕೋಟಿ ರೂ. ಬಿಡುಗಡೆ: ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಕೊಳಗೇರಿ ಅಭಿವೃದ್ಧಿ ಮಂಡಳಿಯ 1.82 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಸಂಬಂಧ 500 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ವಿವಿಧ ವಸತಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ವಣದಲ್ಲಿ ಈವರೆಗೆ 1.31 ಲಕ್ಷ ಮನೆ ಪೂರ್ಣಗೊಂಡಿವೆ. ಮುಕ್ತಾಯದ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಪಂ ಸಿಇಒ ಮತ್ತು ಸಂಬಂಧಿಸಿದ ಇಂಜಿನಿಯರ್​ಗಳ ಸಭೆ ನಡೆಸಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ ಸಾವಿರ ಕೋಟಿ: ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಗಳ ಕ್ರಿಯಾ ಯೋಜನೆ ರೂಪಿಸಬೇಕು. ಈ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸಿ, ಅನುದಾನ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿ ವೇತನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಇದನ್ನು ಭರಿಸಲು ತೀರ್ವನಿಸಿದ್ದು, 6.4 ಲಕ್ಷ ವಿದ್ಯಾರ್ಥಿಗಳ ಸ್ಕಾಲರ್​ಶಿಪ್ ಬಿಡುಗಡೆಗೆ ಸಿದ್ಧವಾಗಿದೆ. ಆಯವ್ಯಯದಲ್ಲಿ 60 ಕೋಟಿ ರೂ. ನಿಗದಿಯಾಗಿದ್ದು, ಇಲಾಖೆಗೆ ಲಭ್ಯ ಅನುದಾನದಲ್ಲಿಯೇ ಮರುಹಂಚಿಕೆ ಮಾಡಿ ಹೆಚ್ಚುವರಿ 40 ಕೋಟಿ ಭರಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net