

ಮುಂಬೈ: ಹೃತಿಕ್ ರೋಶನ್ ಅಭಿನಯದ 'ವಿಕ್ರಂ ವೇದ' ಕಳೆದ ವರ್ಷ ಬಿಡುಗಡೆಯಾಗಿ ಅಷ್ಟೇನೂ ಸದ್ದು ಮಾಡದೇ ಮಾಯವಾಗಿದೆ. ಇತ್ತ ಗೆಳತಿ ಸಬಾ ಆಜಾದ್ ಜತೆಗೆ ಜಾಲಿಯಾಗಿ ಓಡಾಡಕೊಂಡಿರುವ ಹೃತಿಕ್, ಸದ್ದಿಲ್ಲದೆ ತಮ್ಮ ಮುಂದಿನ ಚಿತ್ರದ ತಯಾರಿ ನಡೆಸಿದ್ದಾರಂತೆ.
'ವಿಕ್ರಂ ವೇದ' ಚಿತ್ರದ ನಂತರ 'ರಾಮಾಯಣ' ಚಿತ್ರದಲ್ಲಿ ಹೃತಿಕ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರದಲ್ಲಿ ಹೃತಿಕ್ ನಟಿಸುತ್ತಿಲ್ಲ ಎಂದು ಸುದ್ದಿಯಾಗಿದೆ. ಹಾಗಾದರೆ, ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಕುತುಹಲಕ್ಕೆ ಉತ್ತರ ಸಿಕ್ಕಿದ್ದು, ಹೃತಿಕ್ ಅಭಿನಯದ ಮುಂದಿನ ಚಿತ್ರ 'ಕ್ರಿಶ್ 4' ಆಗಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ವರ್ಷಗಳ ಹಿಂದೆ 'ಕ್ರಿಶ್ 3' ಬಿಡುಗಡೆಯಾದಾಗಲೇ, ಅದೇ ಸರಣಿಯ ಇನ್ನೊಂದು ಚಿತ್ರ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಇದುವರೆಗೂ ಬಂದಿಲ್ಲ. ಈಗ ಹೃತಿಕ್ ಮತ್ತೊಮ್ಮೆ ಸೂಪರ್ ಹೀರೋ ಆಗುವುದಕ್ಕೆ ಮನಸ್ಸು ಮಾಡಿದ್ದಾರೆ. ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 'ಕ್ರಿಶ್ 4' ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಮೊದಲ ಹಂತವಾಗಿ, ಅವರು ಕಥೆಯನ್ನು ಓಕೆ ಲಾಕ್ ಮಾಡಿದ್ದಾರಂತೆ. ಇನ್ನು, ಶೂಟಿಂಗ್ಗೆ ಹೋಗುವುದೊಂದೇ ಬಾಕಿ.
ಆದರೆ, ಇಲ್ಲಿ ಒಂದು ಸಮಸ್ಯೆ ಇದೆ. ಇದಕ್ಕೂ ಮುನ್ನ 'ಕ್ರಿಶ್' ಸರಣಿಯ ಚಿತ್ರಗಳನ್ನು ಈ ಹಿಂದೆ ನಿರ್ದೇಶಿಸಿದ್ದು ಹೃತಿಕ್ ರೋಶನ್ ಅವರ ತಂದೆ ರಾಕೇಶ್ ರೋಶನ್. ಆದರೆ, ಅವರಿಗೆ ವಯಸ್ಸಾಗಿದೆ. ಮೊದಲಿನಂತೆ ನಿರ್ದೇಶನ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, 'ಕ್ರಿಶ್' ಸರಣಿಯ ಮುಂದಿನ ಚಿತ್ರ ನಿರ್ದೇಶಿಸುವುದಕ್ಕೆ ಇನ್ನೊಬ್ಬ ನಿರ್ದೇಶಕರನ್ನು ಹುಡುಕುತ್ತಿದ್ದಾರಂತೆ ಹೃತಿಕ್.
ಈ ಬಾರಿ ಪ್ಯಾನ್ ವರ್ಲ್ಡ್ ಚಿತ್ರವಾಗಿರುವುದರಿಂದ, ಚಿತ್ರಕ್ಕೆ ಹಾಲಿವುಡ್ ನಿರ್ದೇಶಕರನ್ನು ಕರೆತಂದರೆ ಹೇಗೆ ಎಂದು ಅವರು ಯೋಚಿಸುತ್ತಿದ್ದಾರಂತೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಚಿತ್ರ ನಿರ್ದೇಶಿಸಬಲ್ಲ ಸೂಕ್ತ ನಿರ್ದೇಶಕರ ಹುಡುಕಾಟದಲ್ಲಿರುವ ಅವರು, ಸದ್ಯದಲ್ಲೇ ಈ ಸಂಬಂಧ ಅಮೆರಿಕಾಗೆ ಹಾರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಅದೇನಾದರೂ ನಿಜವಾದರೆ, ಹಾಲಿವುಡ್ ನಿರ್ದೇಶಕರೊಬ್ಬರು ಮೊದಲ ಬಾರಿಗೆ ಪಕ್ಕಾ ಕಮರ್ಷಿಯಲ್ ಹಿಂದಿ ಚಿತ್ರವೊಂದನ್ನು ನಿರ್ದೇಶಿಸಿದ ಹಾಗಾಗುತ್ತದೆ.