'ಕೆಜಿಎಫ್​ 2' ದಾಖಲೆಯನ್ನು ಮುರಿದ 'ಪಠಾಣ್​'; ಉಳಿದಿರೋದು 'ಬಾಹುಬಲಿ 2' ಮಾತ್ರ

Pathaan - KGF 2
Published on

ಮುಂಬೈ: ಕಳೆದ ತಿಂಗಳು ಬಿಡುಗಡೆಯಾದ ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರವು ಬಾಕ್​​ ಆಫೀಸ್​ನಲ್ಲಿ ಪ್ರಚಂಡ ಗೆಲುವು ಸಾಧಿಸಿದೆ. ಬಿಡುಗಡೆಯಾದ ಎರಡು ವಾರಗಳಲ್ಲಿ ಜಾಗತಿಕವಾಗಿ ಪ್ಲಸ್​ ಕೋಟಿ ಕಲೆಕ್ಷನ್​ ಮಾಡಿದೆ. ಅಷ್ಟೇ ಅಲ್ಲ, ಇದುವರೆಗೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ 'ಕೆಜಿಎಫ್​ 2' ಚಿತ್ರವನ್ನು ಹಿಂದಿಕ್ಕುವ ಮೂಲಕ ಎರಡನೇ ಸ್ಥಾನಕ್ಕೇರಿದೆ.

ಹೌದು, 'ಪಠಾಣ್​' ಇದೀಗ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೆಯ ಹಿಂದಿ ಚಿತ್ರವಾಗಿದೆ. ಇದಕ್ಕೂ ಮೊದಲು ಈ ಸ್ಥಾನದಲ್ಲಿ ಯಶ್​ ಅಭಿನಯದ 'ಕೆಜಿಎಫ್​ 2' ಇತ್ತು. ಆ ಚಿತ್ರವು 434.70 ಕೋಟಿ ರೂ. ಸಂಗ್ರಹಿಸಿತ್ತು. ಈಗ 'ಪಠಾಣ್​'ನ ಹಿಂದಿ ಅವತರಣಿಕೆಯು 436.75 ಕೋಟಿ ರೂ. ಸಂಗ್ರಹಿಸುವ ಮೂಲಕ ಎರಡನೆಯ ಸ್ಥಾನವನ್ನು ಅಲಂಕರಿಸಿದೆ.

'ಪಠಾಣ್​' ಎರಡನೆಯ ಸ್ಥಾನಕ್ಕೇನೋ ಬಂದಾಗಿದೆ. ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆ ಬರಬಹುದು. ಅದಕ್ಕೂ ಉತ್ತರವಿದೆ. ಮೊದಲ ಸ್ಥಾನದಲ್ಲಿ 'ಬಾಹುಬಲಿ 2' ಚಿತ್ರವಿದ್ದು, ಆ ಚಿತ್ರವು 511 ಕೋಟಿ ರೂ. ಸಂಗ್ರಹಿಸಿದೆ. ಆ ದಾಖಲೆಯನ್ನು ಮುರಿಯುವುದಕ್ಕೆ ಇನ್ನೂ 70-80 ಕೋಟಿಯಷ್ಟು ಕಲೆಕ್ಷನ್​ ಆಗಬೇಕಿದ್ದು, ಮುಂದಿನ ದಿನಗಳಲ್ಲಿ 'ಬಾಹುಬಲಿ 2' ದಾಖಲೆಯನ್ನು 'ಪಠಾಣ್​' ಮುರಿಯುತ್ತದಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಚಿತ್ರ ಬಿಡುಗಡೆಯಾಗಿ ಎರಡು ವಾರಗಳಾಗಿದ್ದು, ಹವಾ ಸಾಕಷ್ಟು ಕಡಿಮೆಯಾಗಿದೆ. ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಾಗಾಗಿ, 'ಪಠಾಣ್​' ಚಿತ್ರವು 'ಬಾಹುಬಲಿ 2' ದಾಖಲೆಯನ್ನು ಮುರಿಯುತ್ತದೋ ಅಥವಾ ಎರಡನೇ ಸ್ಥಾನದಲ್ಲಿ ಉಳಿದುಬಿಡುತ್ತದೋ ಎಂದು ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net