

ಬೆಂಗಳೂರು: ಕಾಂತಾರ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ-2 ಸಿನಿಮಾ ಮಾಡುವುದಾಗಿ ಅದಾಗಲೇ ಹೇಳಿಕೊಂಡಿದ್ದಾರೆ. ಇದೀಗ ಬಾಲಿವುಡ್ ನಟಿ ಊರ್ವಶಿ ಊರ್ವಶಿ ರೌಟೇಲಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋವೊಂದು ಕಾಂತಾರ-2 ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲಕ್ಕೆ ಅವಕಾಶ ಮಾಡಿಕೊಟ್ಟಿದೆ.
ಹೌದು, ನಟಿ ಊರ್ವಶಿ ರೌಟೇಲಾ ರಿಷಬ್ ಶೆಟ್ಟಿ ಜತೆಗೆ ಫೋಟೋ ಹಂಚಿಕೊಂಡು ಕಾಂತಾರ-2 ಲೋಡಿಂಗ್ (loading...) ಎಂದು ಬರೆದುಕೊಂಡಿದ್ದಾರೆ. ಇದೀಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದು, ಕಾಂತಾರ-2 ಸಿನಿಮಾದಲ್ಲಿ ಊರ್ವಶಿ ನಟಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಕಾಂತಾರ-2 ಸಿನಿಮಾದ ಭಾಗವಾಗಿ ರಿಷಬ್ ಶೆಟ್ಟಿ ಅವರನ್ನು ಊರ್ವಶಿ ರೌಟೇಲಾ ಭೇಟಿಯಾಗಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದರೂ, ಅಧಿಕೃತವಾಗಿ ಊರ್ವಶಿ-ರಿಷಬ್ ಭೇಟಿಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸಿನಿಮಾವೊಂದರ ಮಾತುಕಥೆಯ ಭಾಗವಾಗಿ ಊರ್ವಶಿ ಇತ್ತೀಚೆಗೆ ಬೆಂಗಳೂರಿನಲ್ಲಿರುವ ಹೊಂಬಾಳೆ ಫಿಲ್ಮ್ಸ್ ಕಛೇರಿಗೆ ಭೇಟಿ ನೀಡಿದ್ದರು. ಈ ವೇಳೆ ರಿಷಬ್ ಜತೆಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕಾಂತಾರ-2 ಪ್ರೀಕ್ವೆಲ್ ರೂಪದಲ್ಲಿ ತೆರೆಗೆ ಬರುತ್ತಿದೆ ಎಂದಿದ್ದರು. ಈ ಕುರಿತು ಹೆಚ್ಚು ಮಾಹಿತಿ ಬಿಟ್ಟು ಕೊಡದ ರಿಷಬ್ ಕಥೆ ಸಿದ್ಧತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಜೂನ್ನಲ್ಲಿ ಕಾಂತಾರ-2 ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, 2024ರ ಆರಂಭದಲ್ಲಿ ಚಿತ್ರ ತೆರೆಗೆ ಬರುಬಹುದು ಎಂದು ನಿರೀಕ್ಷಿಸಲಾಗಿದೆ.