ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾಗಲೇ ರವೀಂದ್ರ ಜಡೇಜಾಗೆ ಶಾಕ್ ಕೊಟ್ಟ ಐಸಿಸಿ!

#RavindraJadeja #INDvsAUS #ICC #RavindraJadeja
Published on

ನಾಗ್ಪುರ: ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನದಾಟದ ಬೌಲಿಂಗ್ ವೇಳೆ, ರವೀಂದ್ರ ಜಡೇಜಾ ಕೈಬೆರಳಿಗೆ ಮುಲಾಮು ಹಚ್ಚಿಕೊಂಡಿದ್ದಕ್ಕೆ ಆಸ್ಟ್ರೇಲಿಯನ್ನು ಸಾಮಾಜಿಕ ಜಾಲತಾಣದಲ್ಲಿ ಚೆಂಡು ವಿರೂಪದ ಆರೋಪ ಹೊರಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ಆದರೆ ಐಸಿಸಿ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಈ ಆರೋಪವನ್ನು ತಳ್ಳಿ ಹಾಕಿದ್ದು, ಜಡೇಜಾಗೆ ಕ್ಲೀನ್ ಚಿಟ್ ನೀಡಿದ್ದರು. ಜಡೇಜಾ ಕೈಬೆರಳಿಗೆ ನೋವಿ ನಿವಾಕ ಔಷಧಿ ಹಚ್ಚಿಕೊಳ್ಳುತ್ತಿದ್ದರು ಎಂದು ಟೀಮ್ ಇಂಡಿಯಾ ಸ್ಪಷ್ಟನೆ ನೀಡಿತ್ತು. ಐಸಿಸಿ ನಿಯಮ ಪ್ರಕಾರ ಇದಕ್ಕೆ ಅವಕಾಶವಿರುವ ಕಾರಣ ಮ್ಯಾಚ್ ರೆಫ್ರಿ ಜಡೇಜಾ ವಿರುದ್ಧ ಯಾವುದೇ ಆರೋಪ ದಾಖಲಿಸಿಕೊಂಡಿರಲಿಲ್ಲ.

ಇದೀಗ ಮೊದಲ ಟೆಸ್ಟ್ ಪಂದ್ಯ ಭಾರತ ತಂಡದ ಜಯದೊಂದಿಗೆ ಮುಕ್ತಾಯವಾಗುತ್ತಿದ್ದಂತೆ ಆಲ್​ರೌಂಡರ್ ರವೀಂದ್ರ ಜಡೇಜಾಗೆ ಐಸಿಸಿಯ (ICC) ಲೆವೆಲ್-1 ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ಪಂದ್ಯದ ಶುಲ್ಕದಲ್ಲಿ 25% ಮೊತ್ತವನ್ನು ದಂಡ ಕಟ್ಟಲು ಸೂಚನೆ ನೀಡಿದೆ.

ಜಡೇಜಾ ತನ್ನ ತಪ್ಪನ್ನು ಒಪ್ಪಿಕೊಂಡಿರುವುದರಿಂದ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಆನ್​ಫೀಲ್ಡ್ ಅಂಪೈರ್​ಗಳಾದ ನಿತಿನ್ ಮೆನನ್, ರಿಚರ್ಡ್ ಲಿಂಗ್ ವರ್ತ್, ಥರ್ಡ್ ಅಂಪೈರ್ ಮೈಕಲ್ ಗೋಫ್ ಮತ್ತು ನಾಲ್ಕನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಜಡೇಜಾ ವಿರುದ್ಧ ಆರೋಪ ಮಾಡಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್​ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮೊದಲ ಇನ್ನಿಂಗ್ಸ್​ನಲ್ಲಿ ಐದು ವಿಕೆಟ್ ಕಬಳಿಸಿ, ಬ್ಯಾಟಿಂಗ್​ನಲ್ಲಿ 70 ರನ್​ಗಳ ಗಳಿಸಿ ಮಿಂಚಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಎರಡು ವಿಕೆಟ್ ಪಡೆದು ಮತ್ತೊಮ್ಮೆ ತಾನೊಬ್ಬ ಯಶಸ್ವಿ ಆಲ್​ರೌಂಡರ್ ಎಂಬುದನ್ನು ಸ್ಪಷ್ಟಪಡಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net