

ಮುಂಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೊದಲ 2 ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದೇಕೆ ಎಂದು ಕಂಡು ಹಿಡಿಯುವೆ. ಆದರೆ ನಾನು ಯಾರಿಗೂ ಹೇಳುವುದಿಲ್ಲ ಎಂದು ಆರ್ಸಿಬಿ ಮಾಜಿ ಆಟಗಾರ ವಿರಾಟ್ ಕೊಹ್ಲಿ ಆಪ್ತ ಗೆಳೆಯ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ 2 ಪಂದ್ಯಗಳಿಂದ ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆ ಇದೆ. ಜನವರಿ 25 ರಿಂದ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು ಎರಡನೇ ದಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನ್ನಿಂಗ್ಸ್ ಗಳಿಸಿದೆ. ಯಶಸ್ವಿ ಜೈಸ್ವಾಲ್, ಕನ್ನಡಿಗ ಕೆ.ಎಲ್ ರಾಹುಲ್ ಆಕರ್ಷಕ ಅರ್ಧಶತಕಗಳಿಸಿದ್ದಾರೆ.
ಇದರ ನಡುವೆ ಕೊಹ್ಲಿ ಟೆಸ್ಟ್ನಿಂದ ಹಿಂದೆ ಸರಿದಿದ್ದೇಕೆ ಎಂಬುದನ್ನು ಅತೀ ಶೀಘ್ರದಲ್ಲೇ ಕಂಡು ಹಿಡಿಯುವೆ ಎಂದು ಗೆಳೆಯ, ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.
ತನ್ನ ಯೂಟ್ಯೂಬ್ನಲ್ಲಿ ಟೆಸ್ಟ್ ಸರಣಿ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, ವಿರಾಟ್ ಜೊತೆಗಿನ ಸ್ನೇಹದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ನಾನು ಶೀಘ್ರದಲ್ಲೇ ತಿಳಿದುಕೊಳ್ಳುತ್ತೇನೆ ಎಂಬ ನಂಬಿಕೆ ನನ್ನಲಿದೆ. 2 ಟೆಸ್ಟ್ಗಳಿಗೆ ದೂರ ಉಳಿದಿರುವ ಕುರಿತು ನಾನು ತಿಳಿದುಕೊಳ್ಳುತ್ತೇನೆ. ಈವರೆಗೂ ಯಾರಿಗೂ, ಏನು ಆ ವಿಷಯದ ಬಗ್ಗೆ ತಿಳಿದಿಲ್ಲ. ಆದರೆ ಆರ್ಸಿಬಿ ಐಕಾನ್ ಕೊಹ್ಲಿಯ ನಿರ್ಧಾರದ ಬಗ್ಗೆ ಸಾರ್ವಜನಿಕವಾಗಿ ಬಾಯಿ ಬಿಡುವುದಿಲ್ಲ ಎಂದು ವಿರಾಟ್ ಜೊತೆಗಿನ ಬಲವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಗಂಭೀರ ಕಾರಣ ಇಲ್ಲದೆ ಅವರು ಪಂದ್ಯಗಳಿಂದ ಹಿಂದೆ ಸರಿಯುವುದಿಲ್ಲ ಎಂಬುದು ನನಗೆ ಗೊತ್ತು. ಸರಣಿ ಕ್ರಿಕೆಟ್ ಆಡಿದ್ದರಿಂದ ಅಥವಾ ಕೌಟುಂಬಿಕ ಕಾರಣದಿಂದ ಹಿಂದೆ ಸರಿದಿರಬಹುದು. ನಾನು ಶೀಘ್ರದಲ್ಲೇ ಕಂಡುಹಿಡಿಯುತ್ತೇನೆ. ಆದರೆ ನಾನು ನಿಮಗೆ ಹೇಳುವುದಿಲ್ಲ. ಅಂತಹ ವಿಚಾರಗಳನ್ನು ಹೇಳುವ ಮೂಲಕ ಸ್ನೇಹ ಕಳೆದುಕೊಳ್ಳಲ್ಲ. ಅವರ ಸ್ನೇಹ ನನಗೆ ತುಂಬಾ ಮುಖ್ಯ ಎಂದು ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.