ಹಿಂದಿ ದಿವಸ್; ಹಿಂದಿ ಭಾರತದ ಇತರೆ ಭಾಷೆಗಳಿಗೆ ಪ್ರತಿಸ್ಪರ್ಧಿಯಲ್ಲ, ಸ್ನೇಹಿತ; ಅಮಿತ್ ಶಾ ಹೇಳಿಕೆ| Amit Shah

Untitled design (23)
Published on

Amit Shah: ಹಿಂದಿ ಭಾರತದ ಇತರೆ ಭಾಷೆಗಳ ಪ್ರತಿಸ್ಪರ್ಧಿಯಲ್ಲ, ಅದು ಎಲ್ಲಾ ಭಾಷೆಗಳ ಸ್ನೇಹಿತ. ಯಾರೂ ಕೂಡ ಪ್ರತಿಸ್ಪರ್ಧಿಯಾಗಿ ನೋಡಬಾರದು, ಬದಲಾಗಿ ಒಡನಾಡಿ ಭಾಷೆಯಾಗಿ ನೋಡಬೇಕು. ಭಾಷೆಗಳ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭಾನುವಾರ(ಸೆ.14) ಹೇಳಿದ್ದಾರೆ.

ಗುಜರಾತ್​ನ ಗಾಂಧಿನಗರದಲ್ಲಿ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಜರಾತ್​ ಅನ್ನು ಉಲ್ಲೇಖಿಸಿ ಹಿಂದಿ ಮಾತನಾಡುವ ರಾಜ್ಯವಲ್ಲದಿದ್ದರೂ, ತನ್ನದೇ ಆದ ಗುರುತನ್ನು ಕಳೆದುಕೊಳ್ಳದೆ ಹಿಂದಿಯನ್ನು ಸ್ವೀಕರಿಸಿದೆ ಎಂದು ಹೇಳಿದರು.

ಗುಜರಾತ್​ ರಾಜ್ಯ ಭಾಷೆ ಗುಜರಾತಿ. ಆದರೆ ಆರಂಭದಿಂದಲೂ, ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಕೆ.ಎಂ. ಮುನ್ಷಿ ಅವರಂತಹ ನಾಯಕರು ಹಿಂದಿಯನ್ನು ಸ್ವೀಕರಿಸಿದರು, ಮತ್ತು ಅದನ್ನು ಉತ್ತೇಜಿಸಿದರು. ಗುಜರಾತ್ ಹಿಂದಿ ಮತ್ತು ಗುಜರಾತಿ ಎರಡರ ಅಭಿವೃದ್ಧಿಯ ಅದ್ಭುತ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಭಾರತವು ಯಾವಾಗಲೂ "ಭಾಷಾಧಾರಿತ ರಾಷ್ಟ್ರ"ವಾಗಿದೆ. ವೈವಿಧ್ಯಮಯ ಭಾಷೆಗಳು, ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊಂದಿದೆ. ಅಸ್ಸಾಂನ ಬಿಹುದಿಂದ ಹಿಡಿದು ಬಿಹಾರದಲ್ಲಿ ವಿದ್ಯಾಪತಿಯವರ ವಚನಗಳು, ಬಂಗಾಳದಲ್ಲಿ ಬೌಲ್ ಸ್ತೋತ್ರಗಳು, ಈಶಾನ್ಯದಲ್ಲಿ ಭೂಪೇನ್ ಹಜಾರಿಕಾ ಅವರ ಹಾಡುಗಳಿಗೆ ಭಾರತೀಯ ಭಾಷೆಗಳು ತಮ್ಮದೇ ಕೊಡುಗೆ ನೀಡಿವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಭಾಷೆಗಳು ಮತ್ತು ಸಂಸ್ಕೃತಿಯ "ಪುನರುಜ್ಜೀವನದ ಸುವರ್ಣ ಯುಗ"ವನ್ನು ಮುನ್ನಡೆಸಿದ್ದಾರೆ. ಪ್ರಮುಖ ಭಾಷೆಗಳ ಸುಗಮ ಅನುವಾದಕ್ಕಾಗಿ 2024 ರಲ್ಲಿ ಭಾರತೀಯ ಭಾಷಾ ವಿಭಾಗದ ರಚನೆಯನ್ನು ಪ್ರಾರಂಭಿಸಿದ್ದಾರೆ. ಹಿಂದಿ ಮತ್ತು ಭಾರತೀಯ ಭಾಷೆಗಳನ್ನು "ತಂತ್ರಜ್ಞಾನ, ವಿಜ್ಞಾನ, ನ್ಯಾಯ, ಶಿಕ್ಷಣ ಮತ್ತು ಆಡಳಿತದ ಆಧಾರಸ್ತಂಭಗಳನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಪ್ರತಿಪಾದಿಸಿದರು.

ಹಿಂದಿ ದಿವಸ್ ಅನ್ನು ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಇದು ಹಿಂದಿ ಭಾಷೆಯ ಮಹತ್ವವನ್ನು ಗುರುತಿಸಲು ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಮೀಸಲಾಗಿದೆ. 1949ರ ಸೆಪ್ಟೆಂಬರ್ 14 ರಂದು ಭಾರತದ ಸಂವಿಧಾನ ಸಭೆಯು ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಅಂಗೀಕರಿಸಿತು. ಈ ಐತಿಹಾಸಿಕ ನಿರ್ಧಾರವನ್ನು ಸ್ಮರಿಸಲು ಹಿಂದಿ ದಿವಸ್ ಆಚರಿಸಲಾಗುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net