ಹಳೆಯ ಮತ್ತು ಹೊಸ ಪ್ರತಿಸ್ಪರ್ಧಿಗಳಿಗೆ ಸವಾಲಾಗಿದ್ದಾರೆ; ಸಿಎಂ ಎಂ.ಕೆ.ಸ್ಟಾಲಿನ್​ರನ್ನು ಹೊಗಳಿದ ನಟ ರಜನಿಕಾಂತ್| Actor Rajinikanth

Untitled design (21)
Published on

Actor Rajinikanth: ಮುಂದಿನ ವರ್ಷ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆ ವೇದಿಕೆ ಸಜ್ಜಾಗುತ್ತಿದೆ. ಅತ್ತಾ ದಳಪತಿ ವಿಜಯ್ ಪಕ್ಷ ಕಟ್ಟಿ ರಾಜ್ಯ ಪ್ರವಾಸ ಆರಂಭ ಮಾಡಿದ ದಿನವೇ, ಇತ್ತಾ ಸೂಪರ್ ಸ್ಟಾರ್ ರಜನಿಕಾಂತ್ ಸಿಎಂ ಎಂ.ಕೆ.ಸ್ಟಾಲಿನ್​ ಅವರನ್ನು ಹೊಗಳಿದ್ದು, 2026ರ ಚುನಾವಣೆಗೆ ಹಳೆಯ ಮತ್ತು ಹೊಸ ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಶನಿವಾರ (ಸೆ. 13) ರಾತ್ರಿ ನಡೆದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಚಲನಚಿತ್ರೋದ್ಯಮದಲ್ಲಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಅವರನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟ ರಜನಿಕಾಂತ್ ಅವರು ಸಿಎಂ ಎಂ.ಕೆ. ಸ್ಟಾಲಿನ್ ಅವರ ನಾಯಕತ್ವವನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.

ತಮಿಳುನಾಡು ಸಿಎಂ, ರಾಷ್ಟ್ರ ರಾಜಕೀಯದಲ್ಲಿ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ. ತಮ್ಮ ನಗುವಿನ  ಟ್ರೇಡ್‌ಮಾರ್ಕ್​ನೊಂದಿಗೆ ಅವರು 2026 ಕ್ಕೆ ಸಜ್ಜಾಗಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಮಾತ್ರವಲ್ಲದೆ ಹೊಸ ಮತ್ತು ಹಳೆಯ ಪ್ರತಿಸ್ಪರ್ಧಿಗಳಿಗೂ ಸವಾಲೊಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಂಗೀತ ಮಾಂತ್ರಿಕ ಇಳಯರಾಜ ಅವರನ್ನು ಹೊಗಳಿದ ರಜನಿಕಾಂತ್, ಅವರೊಬ್ಬ ಅದ್ಭುತ ವ್ಯಕ್ತಿ. ಮಹಾನ್ ಮೇಸ್ಟ್ರೋಗೆ ಹ್ಯಾಟ್ಸ್ ಆಫ್ ಎಂದರು.

ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಸಿಎಂ ಎಂ.ಕೆ.ಸ್ಟಾಲಿನ್, ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಮೈಲುಗಲ್ಲು ಸ್ಥಾಪಿಸಿದ ಇಳಯರಾಜ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ನಾನು ಈ ವಿನಂತಿಯನ್ನು ತಮಿಳುನಾಡಿನ ಜನರ ಪರವಾಗಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇರುವ ಇಳಯರಾಜ ಅಭಿಮಾನಿಗಳ ಪರವಾಗೊಯೂ ಒತ್ತಾಯಿಸುತ್ತೇನೆ. ಭಾರತ ರತ್ನ ಅವರಿಗೆ ಸೇರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ತಿರುಚ್ಚಿಯಿಂದ ನಟ ವಿಜಯ್ ರಾಜ್ಯ ಪ್ರವಾಸ

ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಶನಿವಾರ ತಿರುಚಿರಾಪಳ್ಳಿಯಲ್ಲಿ ತಮ್ಮ ಚೊಚ್ಚಲ ರಾಜ್ಯವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅದೇ ದಿನ ರಾತ್ರಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಬೆಂಬಲಿಸಿದ್ದಾರೆ.

ತಿರುಚ್ಚಿಯಲ್ಲಿ ಸಾವಿರಾರು ಅನುಯಾಯಿಗಳನ್ನುದ್ದೇಶಿಸಿ ಮಾತನಾಡಿದ ವಿಜಯ್, ಕೇಂದ್ರ ಮತ್ತು ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಾನು ರಾಜಕೀಯ ಪ್ರವೇಶಿಸಿದ್ದು ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದಲೇ ಹೊರತು ಸಂಪತ್ತು ಗಳಿಸುವ ಉದ್ದೇಶದಿಂದಲ್ಲ ಎಂದು ಹೇಳಿದ್ದಾರೆ.

ದ್ರಾವಿಡ ಜನಾಂಗದ ಐಕಾನ್, ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ 1956 ರಲ್ಲಿ ಚುನಾವಣಾ ಸ್ಪರ್ಧೆಗೆ ಪ್ರವೇಶಿಸಲು ನಿರ್ಧರಿಸಿದ ಸ್ಥಳ ತಿರುಚಿರಾಪಳ್ಳಿಯಾಗಿರುವುದರಿಂದ, ತಮ್ಮ ಮೊದಲ ರ್ಯಾಲಿಗೆ ತಿರುಚಿರಾಪಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಇದೇ ವೇಳೆ ಅವರು ಹೇಳಿದರು.

1972 ರಲ್ಲಿ ಎಂಜಿ ರಾಮಚಂದ್ರನ್ ಅವರು ತಮ್ಮ ಪಕ್ಷ ಎಐಎಡಿಎಂಕೆಯನ್ನ  ಸ್ಥಾಪಿಸಿದ ನಂತರ 1974 ರಲ್ಲಿ ತಮ್ಮ ಮೊದಲ ರಾಜ್ಯ ಸಮ್ಮೇಳನವನ್ನು ನಡೆಸಿದ ಸ್ಥಳವೂ ಇದೇ ಆಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net