

Adani Group Shares: ಅದಾನಿ ಗ್ರೂಪ್ ವಿರುದ್ದ ಅಮೆರಿಕಾದ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ ಮಾಡಿದ್ದ ಆರೋಪಗಳಿಗೆ ಸಂಬಂಧಪಟ್ಟಂತೆ ಸೆಬಿ(ಮಾರುಕಟ್ಟೆ ನಿಯಂತ್ರಕ ಸಂಸ್ಥೆ) ಕ್ಲೀನ್ ಚಿಟ್ ನೀಡಿದ ಬಳಿಕ ಇಂದು ಅದಾನಿ ಗ್ರೂಪ್ ಕಂಪನಿಯ ಷೇರುಗಳು ಇಂದು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿವೆ.
ಇಂದಿನ (ಸೆ. 19) ಷೇರು ಮಾರುಕಟ್ಟೆಯಲ್ಲಿ ಆದಾನಿ ಗ್ರೂಪ್ನ ಬಂಡವಾಳ 66 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 2024ರ ಬಳಿಕ ಇದೇ ಮೊದಲ ಬಾರಿಗೆ ಅತ್ಯುನ್ನತ ಮಟ್ಟದಲ್ಲಿ ಅದಾನಿ ಪವರ್ನ ಷೇರುಗಳ ಬೆಲೆ ಶೇ. 12.4 ರಷ್ಟು ಏರಿಕೆಯಾಗಿದೆ.
ಅದಾನಿ ಟೋಟಲ್ ಗ್ಯಾಸ್ ಶೇ. 7.3ರಷ್ಟು, ಅದಾನಿ ಎಂಟರ್ಪ್ರೈಸಸ್ ಶೇ. 5.1ರಷ್ಟು ಹಾಗೂ ಅದಾನಿ ಗ್ರೀನ್ ಎನರ್ಜಿ ಶೇ. 5.3ರಷ್ಟು ಏರಿಕೆ ಕಂಡಿವೆ. ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಪೋರ್ಟ್ಸ್, ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಸೇರಿದಂತೆ ಇತರ ಗುಂಪಿನ ಸಂಸ್ಥೆಗಳ ಷೇರುಗಳ ಸಹ ಗಮನೀಯ ರೀತಿಯಲ್ಲಿ ಏರಿಕೆ ಕಂಡಿವೆ.
ಅದಾನಿ ಗ್ರೂಪ್ನ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಸುಮಾರು 66,000 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ, ಇದರಿಂದಾಗಿ ಗ್ರೂಪ್ನ ಒಟ್ಟಾರೆ ಮೌಲ್ಯ ಸುಮಾರು 13.96 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ವರದಿಯಾಗಿದೆ.
ಸೆಬಿ ಕ್ಲೀನ್ ಚಿಟ್ ಬಗ್ಗೆ ಗೌತಮ್ ಅದಾನಿ ಹೇಳಿದ್ದೇನು?
ಸೆಬಿ ಕ್ಲೀನ್ ಚಿಟ್ ನೀಡಿದ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಗೌತಮ್ ಅದಾನಿ, ಸಮಗ್ರ ತನಿಖೆಯ ನಂತರ, ನಾವು ಯಾವಾಗಲೂ ಸಮರ್ಥಿಸಿಕೊಂಡಿದ್ದನ್ನು, ಹಿಂಡೆನ್ಬರ್ಗ್ ಆರೋಪಗಳು ಆಧಾರರಹಿತವೆಂದು ಸೆಬಿ ಪುನರುಚ್ಚರಿಸಿದೆ. ಪಾರದರ್ಶಕತೆ ಮತ್ತು ಸಮಗ್ರತೆ ಯಾವಾಗಲೂ ಅದಾನಿ ಗುಂಪಿನ ವೈಶಿಷ್ಟ್ಯವಾಗಿದೆ. ಈ ಮೋಸದ ಮತ್ತು ಪ್ರೇರಿತ ವರದಿಯಿಂದಾಗಿ ಹಣವನ್ನು ಕಳೆದುಕೊಂಡ ಹೂಡಿಕೆದಾರರ ನೋವನ್ನು ನಾವು ಆಳವಾಗಿ ಅನುಭವಿಸುತ್ತೇವೆ. ಸುಳ್ಳು ನಿರೂಪಣೆಗಳನ್ನು ಹರಡಿದವರು ರಾಷ್ಟ್ರದ ಕ್ಷಮೆಯಾಚನೆ ಮಾಡಬೇಕು ಎಂದಿದ್ದಾರೆ. (ಏಜೆನ್ಸೀಸ್)