ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತ; ಭಾರತದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್​ ನಿಧನ| Zubeen Garg

Untitled design (49)
Published on

Zubeen Garg: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಭಾರತದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ(52) ಮೃತಪಟ್ಟಿದ್ದಾರೆ ಎಂದು ಶುಕ್ರವಾರ (ಸೆ. 19) ವರದಿಯಾಗಿದೆ.

ಸೆ. 20ರಂದು ನಡೆಯುವ ಈಶಾನ್ಯ ಸಂಗೀತ ಉತ್ಸವದಲ್ಲಿ ತಮ್ಮ ಪ್ರದರ್ಶನ ನೀಡಲು ಜುಬೀನ್ ಗಾರ್ಗ್​​ ಸಿಂಗಾಪುರದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಸ್ಕೂಬಾ ಡೈವಿಂಗ್ ಅಪಘಾತ ನಡೆದಿದ್ದು, ತಕ್ಷಣ ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ವಿಧಿಯಾಟ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಜುಬೀನ್ ಗಾರ್ಗ್​ ನಿಧನದ ಸುದ್ದಿ ಧೃಡಪಡಿಸಿರುವ ಈಶಾನ್ಯ ಭಾರತ ಉತ್ಸವದ ಪ್ರತಿನಿಧಿ ಅನುಜ್ ಕುಮಾರ್ ಬೊರುವಾ, ಗಾರ್ಗ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತುಂಬಾ ದುಃಖವಾಗುತ್ತಿದೆ. ಸ್ಕೂಬಾ ಡೈವಿಂಗ್ ಮಾಡುವಾಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ತಕ್ಷಣವೇ ಸಿಪಿಆರ್ ನೀಡಿ ಸಿಂಗಾಪುರ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಉಳಿಸಲು ಪ್ರಯತ್ನಿಸಿದರೂ, ಉಳಿಯಲಿಲ್ಲ ಎಂದು ತಿಳಿಸಿದ್ದಾರೆ.

ಜುಬೀನ್ ಗಾರ್ಗ್​ ನಿಧನಕ್ಕೆ ಅಸ್ಸಾಂ ಸಿಎಂ ಶರ್ಮಾ ಸಂತಾಪ

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, "ಇಂದು ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಜುಬೀನ್ ಅಸ್ಸಾಂಗೆ ಏನನ್ನು ನೀಡಿದರು ಎಂದು ವಿವರಿಸಲು ನನಗೆ ಪದಗಳೇ ಇಲ್ಲ. ತುಂಬಾ ಬೇಗನೆ ಹೊರಟುಹೋಗಿದ್ದಾರೆ. ಇದು ಅವರು ಹೋಗುವ ವಯಸ್ಸಲ್ಲ. ಜುಬೀನ್ ಅವರ ಧ್ವನಿಯು ಜನರನ್ನು ಚೈತನ್ಯಗೊಳಿಸುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿತ್ತು. ಅವರ ಸಂಗೀತವು ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ನೇರವಾಗಿ ಮಾತನಾಡಿತು. ಅವರು ಎಂದಿಗೂ ತುಂಬಲಾಗದ ಶೂನ್ಯವನ್ನು ಬಿಟ್ಟಿದ್ದಾರೆ. ನಮ್ಮ ಭವಿಷ್ಯದ ಪೀಳಿಗೆಗಳು ಅವರನ್ನು ಅಸ್ಸಾಂ ಸಂಸ್ಕೃತಿಯ ಧೀಮಂತ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತವೆ. ಅವರ ಜೀವನ ಮುಂಬರುವ ದಿನಗಳು ಮತ್ತು ವರ್ಷಗಳಲ್ಲಿ ಇನ್ನೂ ಅನೇಕ ಪ್ರತಿಭಾನ್ವಿತ ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ

ಅಸ್ಸಾಂನ ಧ್ವನಿ ಎಂದೇ ಕರೆಯಲ್ಪಡುವ ಜುಬೀನ್, 'ಗ್ಯಾಂಗ್‌ಸ್ಟರ್' ಚಿತ್ರದ 'ಯಾ ಅಲಿ' ಹಾಡಿನೊಂದಿಗೆ ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. ಈ ಹಾಡು ಭಾರತದಾದ್ಯಂತ ಹಿಟ್ ಆಯಿತು. ಅವರು 'ದಿಲ್ ತು ಹಿ ಬಾತಾ' (ಕ್ರಿಶ್ 3) ಮತ್ತು 'ಜಾನೆ ಕ್ಯಾ ಚಾಹೆ ಮನ್' (ಪ್ಯಾರ್ ಕೆ ಸೈಡ್ ಎಫೆಕ್ಟ್ಸ್) ನಂತಹ ಇತರ ಬಾಲಿವುಡ್ ಹಿಟ್‌ಗಳನ್ನು ಸಹ ನೀಡಿದ್ದಾರೆ. ಹಿಂದಿ ಜೊತೆಗೆ ಅಸ್ಸಾಮಿ, ಬಂಗಾಳಿ, ನೇಪಾಳಿ ಮತ್ತು ಹಲವಾರು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ವೈವಿಧ್ಯಮಯ ಪ್ರೇಕ್ಷಕರಲ್ಲಿ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದ್ದರು.

ಜುಬೀನ್ ಗಾರ್ಗ್​ ಹಠಾತ್ ನಿಧನವು ಅಭಿಮಾನಿಗಳು ಮತ್ತು ಇಡೀ ಅಸ್ಸಾಮಿ ಸಮುದಾಯವನ್ನು ಆಘಾತಗೊಳಿಸಿದೆ. ಅಸ್ಸಾಂ ಸೇರಿ ಇಡೀ ಈಶಾನ್ಯ ಭಾರತ ಸೇರಿ ಅದರಾಚೆಗಿನ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net