ಮತಗಳ್ಳತನ ಆರೋಪ; ಸಂವಿಧಾನಿಕ ಸಂಸ್ಥೆಗಳನ್ನು ಗುರಿ ಮಾಡದೇ ರಾಹುಲ್ ಗಾಂಧಿ ತಮ್ಮ ನಾಯಕತ್ವದ ವೈಫಲ್ಯ ಒಪ್ಪಿಕೊಳ್ಳಲಿ: ಕಿರಣ್ ರಿಜಿಜು| Kiren Rijiju

Untitled design (48)
Published on

Kiren Rijiju: ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಸೆ. 18ರಂದು ಪುನಃ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದು, ಮುಖ್ಯ ಚುನಾವಣಾ ಆಯುಕ್ತ ಮತಗಳ್ಳತನ ಮಾಡುವವರನ್ನು ರಕ್ಷಣೆ ಮಾಡ್ತಿದ್ದಾರೆ ಎಂದು ಹೇಳಿದ್ದರು. ಈ ಕುರಿತು ಶುಕ್ರವಾರ (ಸೆ. 19) ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಸಂವಿಧಾನಿಕ ಸಂಸ್ಥೆಗಳನ್ನು ಗುರಿಯಾಗಿಸುವ ಬದಲು ತಮ್ಮ ನಾಯಕತ್ವದ ವೈಫಲ್ಯವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ

ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು, ನೀವು ಚುನಾವಣೆಗಳಲ್ಲಿ ಪದೇ ಪದೇ ಸೋತರೆ, ನಿಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಬೇಕು. ನಿಮ್ಮ ನಾಯಕತ್ವದ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ಆದರೆ ಅದರ ಬದಲಾಗಿ, ನೀವು ಸಂಸ್ಥೆಗಳನ್ನು ದೂಷಿಸಲು ಪ್ರಾರಂಭಿಸಿದ್ದೀರಿ, ಇದು ಅದು ಸರಿಯಾದ ಮಾರ್ಗವೇ? ಎಂದು ಪ್ರಶ್ನಿಸಿದ್ದಾರೆ.

ಚುನಾವಣೆಗಳಲ್ಲಿನ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ರಾಹುಲ್ ಗಾಂಧಿ ಬೇರೆ ಯಾವುದೇ ಸಂಸ್ಥೆಯನ್ನು ಗುರಿಯಾಗಿಸಲು ಅಥವಾ ಗಮನವನ್ನು ಬೇರೆಡೆಗೆ ಬದಲಾಯಿಸಲು ಸಾಧ್ಯವಿಲ್ಲ. ಅಂತಹ ಪ್ರಯತ್ನಗಳನ್ನು ಜನರು ಸ್ವೀಕರಿಸುವುದಿಲ್ಲ. ಇದು ಭಾರತ ವಿರೋಧಿ ಪ್ರಚಾರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಯಾವ ಕಥನಗಳನ್ನು ಸೃಷ್ಟಿಸುತ್ತದೆಯೋ, ಅದೇ ಕಥನಗಳನ್ನು ರಾಹುಲ್ ಗಾಂಧಿ ಮತ್ತು ಅವರ ಕಂಪನಿಯು ಭಾರತದಲ್ಲಿ ಪ್ರಚಾರ ಮಾಡುತ್ತದೆ. ಹಲವು ವರ್ಷಗಳಿಂದ, ಇವರು ಹೇಳುವುದನ್ನು ಪಾಕಿಸ್ತಾನದಲ್ಲಿರುವ ಭಾರತ ವಿರೋಧಿ ಗುಂಪುಗಳು ಅದನ್ನೇ ಬಳಸುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ದೇಶದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತಗಳ್ಳತನ ನಡೆಯುತ್ತಿದೆ. ಮತಗಳ್ಳತನ ಮಾಡುವವರನ್ನು ಭಾರತೀಯ ಚುನಾವಣೆ ಆಯೋಗ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಕ್ಷಣೆ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೇ ಭಾರತೀಯ ಪ್ರಜಾಪ್ರಭುತ್ವವನ್ನು ನಾಶ ಮಾಡುವವರಿಗೆ ಬೆಂಬವಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದರು.

ಕರ್ನಾಟಕ ಆಳಂದ ವಿಧಾನಸಭೆ ಕ್ಷೇತ್ರ ಮತ್ತು ಮಹಾರಾಷ್ಟ್ರದ ರಾಜೂರು ಕ್ಷೇತ್ರದ ಮತದಾರರ ಉದಾಹರಣೆ ನೀಡಿ, ಸಾಫ್ಟವೇರ್ ಬಳಿಸಿ ಮತಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ. ಆಳಂದ ಕ್ಷೇತ್ರದ 6 ಸಾವಿರ ಮತಗಳಲ್ಲಿ ಹೊರ ರಾಜ್ಯದ ಲಾಗಿನ್ ಐಡಿ ಮೂಲಕ ಅಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.

ಚುನಾವಣೆ ಆಯೋಗದ ಪ್ರತಿಕ್ರಿಯೆ

ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಚುನಾವಣಾ ಆಯೋಗವು ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಆರೋಪಗಳನ್ನು "ತಪ್ಪು ಮತ್ತು ಆಧಾರರಹಿತ" ಎಂದು ಹೇಳಿ ತಳ್ಳಿ ಹಾಕಿದೆ. ಸರಿಯಾದ ಪ್ರಕ್ರಿಯೆಯಿಲ್ಲದೆ ಯಾವುದೇ ಮತಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net